ಶಿವಮೊಗ್ಗ: ಸಾಲದ ವಿಚಾರವಾಗಿ ಬಾರ್ ಸಿಬ್ಬಂದಿ ಹಲ್ಲೆ ನಡೆಸಿ, ಬೈಕ್ ಜಪ್ತಿ ಮಾಡಿ ಅವಮಾನಿಸಿದ ಹಿನ್ನೆಲೆ ವ್ಯಕ್ತಿಯೊಬ್ಬರು ನೇಣಿಗೆ ಶರಣಾಗಿದ್ದಾರೆ ಎಂದು ಆರೋಪಿಸಲಾಗಿದೆ. (ಈ ಸುದ್ದಿಯನ್ನು ಇನ್ನು 38 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ನಗರದ ಹೊಸಮನೆ ಬಡಾವಣೆ ನಿವಾಸಿ ಶರತ್ ಬಾಬು (41) ಮೃತರು. ಶರತ್ ಬಾಬು ಅವರು ನಗರದ ಬಾರ್ ಒಂದರಲ್ಲಿ ₹35,000 ಸಾಲ ಮಾಡಿದ್ದಾರೆ ಎಂದು ಆರೋಪಿಸಿ ನವೆಂಬರ್ 11ರ ರಾತ್ರಿ ಆ ಬಾರ್‌ನ ಕ್ಯಾಶಿಯರ್ ಹಲ್ಲೆ ನಡೆಸಿದ್ದರು. ಅಲ್ಲದೆ ಶರತ್ ಬಾಬು ಅವರ ಪಲ್ಸರ್ ಬೈಕ್ ಜಪ್ತಿ ಮಾಡಿದ್ದರು ಎಂದು ಆರೋಪಿಸಲಾಗಿದೆ. ಹಲ್ಲೆಗೊಳಗಾಗಿದ್ದ ಶರತ್ ಅವರನ್ನು ಕುಟುಂಬದವರು ಮನೆಗೆ ಕರೆದೊಯ್ದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆಯಿಂದ ಶರತ್ ನೊಂದಿದ್ದು, ನವೆಂಬರ್ 12ರ ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಕೂಡಲೆ ಕುಟುಂಬದವರು ಆಸ್ಪತ್ರೆಗೆ ಕರೆದೊಯ್ದಿದ್ದರು. ಪರೀಕ್ಷಿಸಿದ ವೈದ್ಯರು ಶರತ್ ಬಾಬು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.