ಶಿವಮೊಗ್ಗ: ಮರಗಳನ್ನು ಕಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಸಾರ್ವಜನಿಕರು ನೀಡಿದ್ದ ದೂರನ್ನು ಅರಣ್ಯ ಇಲಾಖೆಗೆ ಕಳುಹಿಸುವ ಬದಲು ಅಬಕಾರಿ ಇಲಾಖೆಗೆ ಶಿಫಾರಸು ಮಾಡಿ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಎಡವಟ್ಟು ಮಾಡಿದ್ದಾರೆ. (ಈ ಸುದ್ದಿಯನ್ನು ಇನ್ನು 56 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ಮರ ಕಡಿದವರ ವಿರುದ್ಧ ಸೂಕ್ತ ಕ್ರಮ ವಹಿಸುವಂತೆ ಕೋರಿ ಜಿಲ್ಲಾಧಿಕಾರಿ ಕಚೇರಿಯಿಂದ ಅಬಕಾರಿ ಇಲಾಖೆಯ ಉಪ ಆಯುಕ್ತರಿಗೆ ಬರೆದಿರುವ ಪತ್ರ ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಏನಿದು ಪ್ರಕರಣ?
ಸೈನ್ಸ್ ಮೈದಾನದಲ್ಲಿ ಮರಗಳನ್ನು ಕಡಿದು ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಆಗಸ್ಟ್ 29 ರಂದು ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಆ ಮನವಿಯನ್ನು ಅರಣ್ಯ ಇಲಾಖೆಗೆ ಕಳುಹಿಸುವ ಬದಲು ಅಬಕಾರಿ ಉಪ ಆಯುಕ್ತರಿಗೆ ಕಳುಹಿಸಿ ಅಧಿಕಾರಿಗಳು ಕೈತೊಳೆದುಕೊಂಡಿದ್ದಾರೆ. ಜಿಲ್ಲಾಧಿಕಾರಿಗಳ ಪರವಾಗಿ ಶೋಭಲಕ್ಷ್ಮೀ ಎಂಬುವವರು ಈ ಪತ್ರಕ್ಕೆ ಸಹಿ ಮಾಡಿದ್ದಾರೆ.
ಇದಷ್ಟೇ ಅಲ್ಲದೆ, ಹೊಸನಗರ ತಾಲ್ಲೂಕಿನ ಬಟ್ಟೆಮಲ್ಲಪ್ಪ ಭಾಗದಲ್ಲಿ ಮಂಗಗಳ ಹಾವಳಿ ನಿಯಂತ್ರಿಸುವಂತೆ ಬಿ.ಎಲ್. ಪ್ರವೀಣ್ ಎಂಬುವರು ನೀಡಿದ್ದ ದೂರು ಅರ್ಜಿಯನ್ನೂ ಸಹ ಡಿಸಿ ಕಚೇರಿ ಸಿಬ್ಬಂದಿ ಅಬಕಾರಿ ಇಲಾಖೆಯ ಅಂಗಳಕ್ಕೇ ರವಾನಿಸಿದ್ದಾರೆ. ಅರಣ್ಯ ಮತ್ತು ಅಬಕಾರಿ ಇಲಾಖೆಯ ವ್ಯತ್ಯಾಸವೂ ತಿಳಿಯದ ಅಧಿಕಾರಿಗಳ ಬೇಜವಾಬ್ದಾರಿ ಕಾರ್ಯವೈಖರಿಗೆ ನಾಗರಿಕ ಹಿತರಕ್ಷಣಾ ವೇದಿಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಜಿಲ್ಲಾಧಿಕಾರಿ ಕಚೇರಿಗೆ ಸಾರ್ವಜನಿಕರು ನೀಡುವ ಸಾವಿರಾರು ಮನವಿಗಳು ಹೀಗೆ ಸಂಬಂಧವಿಲ್ಲದ ಇಲಾಖೆಗಳಿಗೆ ಹೋಗುವುದರಿಂದಲೇ ಯಾವ ಸಮಸ್ಯೆಯೂ ಪರಿಹಾರ ಕಾಣುತ್ತಿಲ್ಲ ಎಂದು ಸಾರ್ವಜನಿಕರು ಆಪಾದಿಸಿದ್ದಾರೆ.