ಮನೆಗೆ ನುಗ್ಗಿ ವೃದ್ಧೆಗೆ ಬಲವಂತವಾಗಿ ಪ್ರಸಾದ ತಿನ್ನಿಸಿ ಹಿಂಬಾಗಿಲಿನಿಂದ ವ್ಯಕ್ತಿ ಪರಾರಿ, ಏನಿದು?

ಶಿವಮೊಗ್ಗ: ಮನೆಯಲ್ಲಿ ಒಂಟಿಯಾಗಿದ್ದ ವೃದ್ಧೆಗೆ ಬಲವಂತವಾಗಿ ಪ್ರಸಾದ ತಿನ್ನಿಸಿ, ಕಿವಿಯಲ್ಲಿದ್ದ ಬಂಗಾರದ ಓಲೆಗಳನ್ನು ದೋಚಲು ಯತ್ನಿಸಿದ ಘಟನೆ ನಗರದ ರಾಜೇಂದ್ರ ನಗರದಲ್ಲಿ ನಡೆದಿದೆ. 75 ವರ್ಷದ ಸಾವಿತ್ರಮ್ಮ ಎಂಬುವವರ ಮನೆಗೆ ನುಗ್ಗಿ ದರೋಡೆಗೆ ಯತ್ನಿಸಲಾಗಿದೆ. (ಈ ಸುದ್ದಿಯನ್ನು ಇನ್ನು 42 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ವೃದ್ಧೆ ಮನೆಯಲ್ಲಿ ಒಂಟಿಯಾಗಿದ್ದ ವೇಳೆ ಒಳನುಗ್ಗಿದ ವ್ಯಕ್ತಿ, ಆಕೆಗೆ ಬಲವಂತವಾಗಿ ಪ್ರಸಾದ ತಿನ್ನಿಸಿದ್ದಾನೆ. ಬಳಿಕ ಕಿವಿಯಲ್ಲಿದ್ದ ಬಂಗಾರದ ಓಲೆಗಳನ್ನು ಬಿಚ್ಚಿಕೊಳ್ಳಲು ಯತ್ನಿಸಿದ್ದಾನೆ. ವೃದ್ಧೆ ಕಿರುಚಾಡಿದಾಗ ಆಕೆಯ ಮುಖಕ್ಕೆ ದಿಂಬು ಒತ್ತಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.

Shimoga-Police-Jeep

ಅಷ್ಟರಲ್ಲಿ ಮನೆಗೆ ಬಂದ ವೃದ್ಧೆಯ ಮೊಮ್ಮಗಳು ಕಿಟಕಿಯಲ್ಲಿ ಅಪರಿಚಿತ ವ್ಯಕ್ತಿಯನ್ನು ಕಂಡು ಪತಿ ಹಾಗೂ ನೆರೆಹೊರೆಯವರನ್ನು ಕರೆದಿದ್ದಾರೆ. ಅವರು ಮನೆಯ ಬಾಗಿಲು ತಳ್ಳಿ ಒಳನುಗ್ಗಲು ಯತ್ನಿಸಿದಾಗ ಕಳ್ಳ ಮನೆಯ ಹಿಂಬಾಗಿಲಿನಿಂದ ಓಡಿಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಓಡಿಹೋಗುವಾಗ ಕಳ್ಳ ತನ್ನ ಮೊಬೈಲ್ ಫೋನ್ ಅನ್ನು ಮನೆಯಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಇನ್ನು, ಕಿವಿಗೆ ಗಾಯವಾಗಿ ಸುಸ್ತಾಗಿದ್ದ ಸಾವಿತ್ರಮ್ಮ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.