ಶಿವಮೊಗ್ಗ: ಅಲ್ಪಸಂಖ್ಯಾತರ ನಿರ್ದೇಶನಾಲಯವು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಮಾತ್ರ ಸೇನಾ ತರಬೇತಿ ನೀಡಲು ಕರೆದಿರುವ ಟೆಂಡರ್ ರದ್ದುಗೊಳಿಸಬೇಕು. ರಾಜ್ಯ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ಕಾಯ್ದೆ-2022 ಹಾಗೂ ರಾಜ್ಯ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020 ಅನ್ನು ಹಿಂಪಡೆಯದೆ ಯಥಾವತ್ತಾಗಿ ಮುಂದುವರಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ವಾಸುದೇವ್ ಆಗ್ರಹಿಸಿದರು. (ಈ ಸುದ್ದಿಯನ್ನು ಇನ್ನು 72 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಲ್ಪಸಂಖ್ಯಾತರ ನಿರ್ದೇಶನಾಲಯವು 2026-27ನೇ ಸಾಲಿನಲ್ಲಿ ಅಲ್ಪಸಂಖ್ಯಾತ ಸಮುದಾಯದ 60 ವಿದ್ಯಾರ್ಥಿಗಳಿಗೆ 60 ದಿನಗಳ ಸೇನಾ ತರಬೇತಿ ನೀಡಲು ಟೆಂಡರ್ ಕರೆದಿರುವುದು ಸರಿಯಲ್ಲ. ಸಾರ್ವಜನಿಕರ ತೆರಿಗೆ ಹಣದಲ್ಲಿ ಒಂದು ಸಮುದಾಯದ ವಿದ್ಯಾರ್ಥಿಗಳಿಗೆ ಮಾತ್ರ ತರಬೇತಿ ನೀಡುವುದು ಸಮಾನತೆಯ ಆಶಯಕ್ಕೆ ವಿರುದ್ಧವಾಗಿದೆ. ಆರ್ಥಿಕ ಹಿಂದುಳಿದಿರುವಿಕೆಯನ್ನು ಮಾನದಂಡವಾಗಿಟ್ಟುಕೊಂಡು ಎಲ್ಲ ಸಮುದಾಯಗಳ ಅರ್ಹ ವಿದ್ಯಾರ್ಥಿಗಳಿಗೂ ತರಬೇತಿ ನೀಡಬೇಕು. ಆದ್ದರಿಂದ ಟೆಂಡರ್ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

ಕಾಯ್ದೆ ಹಿಂಪಡೆಯುವುದಕ್ಕೆ ವಿರೋಧ
ಗೋಹತ್ಯೆ ನಿಷೇಧ ಕಾಯ್ದೆಯು ರೈತರ ಹಿತಾಸಕ್ತಿ ಹಾಗೂ ಪಶುಸಂಪತ್ತಿನ ರಕ್ಷಣೆಗೆ ಅಗತ್ಯವಾಗಿದೆ. ಕಾಯ್ದೆಯನ್ನು ಹಿಂಪಡೆಯುವ ಅಥವಾ ದುರ್ಬಲಗೊಳಿಸುವ ಪ್ರಯತ್ನವನ್ನು ಖಂಡಿಸುತ್ತೇವೆ. ಈ ವಿಚಾರಗಳಲ್ಲಿ ಸರ್ಕಾರ ಮುಂದುವರಿದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ವಾಸುದೇವ್ ಎಚ್ಚರಿಸಿದರು.
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮಾತ್ರ 60 ದಿನಗಳ ಸೇನಾ ತರಬೇತಿ ನೀಡುವ ಸರ್ಕಾರದ ಕ್ರಮ ಸರಿಯಲ್ಲ. ಜಾತಿ, ಧರ್ಮದ ಆಧಾರವಿಲ್ಲದೆ ಎಲ್ಲ ಬಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೂ ಎನ್ಸಿಸಿ ಮೂಲಕ ಸೇನಾ ತರಬೇತಿ ನೀಡಬೇಕು.
– ರಾಜೇಶ್ ಗೌಡ, ವಿಭಾಗ ಸಹಕಾರ್ಯದರ್ಶಿ
ಗೋಹತ್ಯೆ ನಿಷೇಧ ಕಾಯ್ದೆ-2020 ಅನ್ನು ಯಾವುದೇ ಕಾರಣಕ್ಕೂ ಸಡಿಲಗೊಳಿಸಬಾರದು. ಕಾಯ್ದೆಗೆ ತಿದ್ದುಪಡಿ ತಂದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದರೆ ರಾಜ್ಯದಲ್ಲಿ ಉಂಟಾಗುವ ಕೋಮು ಸಂಘರ್ಷಗಳಿಗೆ ಸರ್ಕಾರವೇ ಹೊಣೆ.
– ಸುರೇಶ್ ಬಾಬು, ಬಜರಂಗದಳ ಜಿಲ್ಲಾ ಸಂಯೋಜಕ
ಪತ್ರಿಕಾಗೋಷ್ಠಿಯಲ್ಲಿ ಪ್ರಾಂತ ಸಾಮರಸ್ಯ ಪ್ರಮುಖ್ ರಮೇಶ್ ಬಾಬು, ಅಂಕುಶ್, ಆನಂದರಾವ್, ವೇಣು ಇದ್ದರು.