ಕೋಟಿ ಕೋಟಿ ಅವ್ಯವಹಾರ, ಇಲಾಖೆ ವಿರುದ್ಧ ದೂರು, ಆರಗ ಜ್ಞಾನೇಂದ್ರ ಎಚ್ಚರಿಕೆ, ಏನಿದು?

ತೀರ್ಥಹಳ್ಳಿ: ರಾಜ್ಯ ಕಾರ್ಮಿಕ ಇಲಾಖೆಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಮಾರು ₹1,200 ಕೋಟಿ ಅವ್ಯವಹಾರ (scam) ನಡೆಸಲಾಗಿದೆ. ಇಲಾಖೆಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ವಿಧಾನಮಂಡಲ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ, ಶಾಸಕ ಆರಗ ಜ್ಞಾನೇಂದ್ರ ಹೇಳಿದರು. (ಈ ಸುದ್ದಿಯನ್ನು ಇನ್ನು 72 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ಉಪಕರಣಗಳ ಕಿಟ್ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

Home-Minister-Araga-Jnanendra-Press-meet-in-Shimoga.

ಶಿವಮೊಗ್ಗ ಜಿಲ್ಲೆಯಲ್ಲಿ 33,500 ಕಾರ್ಮಿಕರು ಹಾಗೂ ಅವರ ಕುಟುಂಬದವರ ಆರೋಗ್ಯ ತಪಾಸಣೆ ಹೆಸರಿನಲ್ಲಿ ₹9.80 ಕೋಟಿ ಖರ್ಚು ಮಾಡಲಾಗಿದೆ ಎಂದು ನಕಲಿ ದಾಖಲೆ ಸೃಷ್ಟಿಸಲಾಗಿದೆ. ಗುಜರಿಯಲ್ಲಿದ್ದ ವಾಹನದ ನೋಂದಣಿ ಪತ್ರ ತೋರಿಸಿ ಸಂಚಾರಿ ಆರೋಗ್ಯ ಘಟಕದ ಹೆಸರಿನಲ್ಲಿ ₹45 ಲಕ್ಷ ಬಿಡುಗಡೆ ಮಾಡಿಕೊಳ್ಳಲಾಗಿದೆ. ವೈದ್ಯರು ಹಾಗೂ ಶುಶ್ರೂಷಕರ ಹೆಸರಿನಲ್ಲಿ ಆಸ್ಪತ್ರೆಯೊಂದು ₹600 ಕೋಟಿ ಪಡೆದುಕೊಂಡಿದೆ ಎಂದು ಆರೋಪಿಸಿದರು.

ಅಕ್ರಮಗಳ ಕುರಿತು ಚರ್ಚಿಸಲು ಮಂಗಳವಾರ ಬೆಂಗಳೂರಿನ ಕಾರ್ಮಿಕ ಇಲಾಖೆಯ ಪ್ರಧಾನ ಕಚೇರಿಯಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.

##ಕಾರ್ಮಿಕರಿಗೆ ಕಿಟ್‌ ವಿತರಣೆ

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ

ಇದೇ ವೇಳೆ ಇಲಾಖೆಯಿಂದ 525 ಮೇಸನ್, ವೆಲ್ಡರ್, ಕಾರ್ಪೆಂಟರ್, ಪೇಂಟರ್, ಪ್ಲಂಬರ್ ಹಾಗೂ ಎಲೆಕ್ಟ್ರಿಷಿಯನ್ ಕಾರ್ಮಿಕರಿಗೆ ಕಿಟ್ ವಿತರಿಸಲಾಯಿತು. ಕಿಟ್‌ಗಳ ಮೌಲ್ಯ ₹15,000 ಎಂದು ಅಧಿಕಾರಿಗಳು ಹೇಳಿದ್ದರೂ, ಅವುಗಳ ಒಳಗಿದ್ದ ಶೂ, ಹೆಲ್ಮೆಟ್, ಕೋಟು ಸೇರಿದಂತೆ ವಿವಿಧ ವಸ್ತುಗಳು ಕಳಪೆಯಾಗಿವೆ. ತೆರೆಯುತ್ತಿದ್ದಂತೆ ಮುರಿದು ಬಿದ್ದವು. ಇದರಿಂದ ಆಕ್ರೋಶಗೊಂಡ ಕಾರ್ಮಿಕರು ದೂರು ನೀಡುವುದಾಗಿ ಎಚ್ಚರಿಸಿದರು.

ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎನ್. ಶಚೀಂದ್ರ ಹೆಗ್ಡೆ ಮಾತನಾಡಿ, ಶ್ರಮಿಕ ವರ್ಗದ ಸುರಕ್ಷತೆ ಮುಖ್ಯವಾಗಿದ್ದು ಸರ್ಕಾರದ ಸೌಲಭ್ಯಗಳನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದರು.

ಕಾರ್ಮಿಕ ನಿರೀಕ್ಷಕಿ ಸುಖಿತ ಮಾತನಾಡಿ, ಸೇವಾಸಿಂಧು ಕೇಂದ್ರಗಳಲ್ಲಿ ಕಾರ್ಡ್ ನವೀಕರಣಕ್ಕೆ ನಿಗದಿತ ಶುಲ್ಕಕ್ಕಿಂತ ಹೆಚ್ಚು ಹಣ ಪಡೆದರೆ ದೂರು ನೀಡಬಹುದು. ಅಂತಹ ಕೇಂದ್ರಗಳ ಐಡಿ ರದ್ದುಪಡಿಸಲಾಗುವುದು ಎಂದು ತಿಳಿಸಿದರು.