ಶಿವಮೊಗ್ಗ: ನಗರದಲ್ಲಿ ಆಟೊ ರಿಕ್ಷಾಗಳ ಸಂಖ್ಯೆ ಹೆಚ್ಚಾಗಿ ಚಾಲಕರು ಜೀವನ ನಿರ್ವಹಣೆಗೆ ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ ಮುಂದಿನ 10 ವರ್ಷಗಳವರೆಗೆ ಹೊಸ ಆಟೊ ರಿಕ್ಷಾಗಳಿಗೆ ಪರ್ಮಿಟ್ ನೀಡುವುದನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ನಗರ ಆಟೊ ಚಾಲಕರ ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. (ಈ ಸುದ್ದಿಯನ್ನು ಇನ್ನು 58 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ನಗರದಲ್ಲಿ ಈಗಾಗಲೇ ಸುಮಾರು 8 ಸಾವಿರ ಆಟೊ ರಿಕ್ಷಾಗಳು ಹಾಗೂ ಹೆಚ್ಚಿನ ಸಂಖ್ಯೆಯ ನಗರ ಸಾರಿಗೆ ಬಸ್ಗಳು ಸಂಚರಿಸುತ್ತಿವೆ. ನಗರದ ವ್ಯಾಪ್ತಿಯೂ ಕಡಿಮೆಯಿರುವುದರಿಂದ ಸೂಕ್ತ ಬಾಡಿಗೆ ದೊರೆಯುತ್ತಿಲ್ಲ. ಸಾಲ ಮಾಡಿ ಆಟೊ ಖರೀದಿಸಿರುವ ಚಾಲಕರು ದಿನದ ದುಡಿಮೆಯಲ್ಲಿ ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ ಹಾಗೂ ವಾಹನದ ನಿರ್ವಹಣೆ ವೆಚ್ಚ ಭರಿಸಲು ಪರದಾಡುವಂತಾಗಿದೆ. ದಿನಕ್ಕೆ ₹300 ಉಳಿಸುವುದೂ ಕಷ್ಟವಾಗಿದೆ ಎಂದು ಸಂಘದ ಪ್ರಮುಖರು ಕಳವಳ ವ್ಯಕ್ತಪಡಿಸಿದರು.

ಜುಲೈ 15 ರಂದು ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಒಬ್ಬರಿಗೆ ಒಂದು ಹೊಸ ಆಟೊ ಪರ್ಮಿಟ್ ನೀಡಲು ನಿರ್ಣಯ ಕೈಗೊಳ್ಳಲಾಗಿದೆ. ಇದರಿಂದ ಚಾಲಕರಿಗೆ ಮತ್ತಷ್ಟು ತೊಂದರೆಯಾಗಲಿದೆ. ತಕ್ಷಣವೇ ಈ ನಿರ್ಧಾರ ಹಿಂಪಡೆಯಬೇಕು. ಮುಂದಿನ 10 ವರ್ಷ ಹೊಸ ಪರ್ಮಿಟ್ ನೀಡದಂತೆ ಪ್ರಾಧಿಕಾರದ ಅಧ್ಯಕ್ಷರಿಗೆ ಸೂಚಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಸಂಸ್ಥಾಪಕ ಆಲ್ಲಾಬಕ್ಷಿ, ಉಪಾಧ್ಯಕ್ಷ ಇಕ್ಬಾಲ್, ಮಂಜಣ್ಣ, ಪ್ರಧಾನ ಕಾರ್ಯದರ್ಶಿ ಹರೀಶ್, ಸಂಘಟನಾ ಕಾರ್ಯದರ್ಶಿ ಫೈರೋಜ್, ಸಹ ಕಾರ್ಯದರ್ಶಿ ಅಪ್ಸರ್ ಪಾಷ, ನಿರ್ದೇಶಕ ಯಾಸಿನ್, ಆಟೊ ಚಾಲಕರಾದ ಪಂಚಾಕ್ಷರಿ ಹಾಗೂ ಎಂ.ವಿ. ಸುಭಾನ್ ಸೇರಿ ಇದ್ದರು.