ಶಿವಮೊಗ್ಗ: ಸಾಲವಾಗಿ ಪಡೆದಿದ್ದ ₹200 ಹಣ ವಾಪಸ್ ನೀಡಲು ಕಾಲಾವಕಾಶ ಕೇಳಿದ ವ್ಯಕ್ತಿಯ ಮೇಲೆ ಬಾಟಲಿಯಿಂದ ಹೊಡೆದು ಜೀವಬೆದರಿಕೆ ಹಾಕಲಾಗಿದೆ. ನಗರದ ಸೂಳೆಬೈಲು ಬೈಪಾಸ್ ರಸ್ತೆಯ ಶ್ರೀನಿಧಿ ಬಾರ್ ಸಮೀಪ ನಡೆದಿದೆ. (ಈ ಸುದ್ದಿಯನ್ನು ಇನ್ನು 37 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ಅಣ್ಣಪ್ಪ (48) ಹಲ್ಲೆಗೊಳಗಾದ ವ್ಯಕ್ತಿ. ಗೋಪಿ ಎಂಬಾತ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅಣ್ಣಪ್ಪ ಅವರು ಸೋಮವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ತಡೆದು ನಿಲ್ಲಿಸಿದ ಗೋಪಿ, ತನಗೆ ನೀಡಬೇಕಿದ್ದ ₹200 ವಾಪಸ್ ನೀಡುವಂತೆ ಕೇಳಿದ್ದಾನೆ.

ಅಣ್ಣಪ್ಪ ತನ್ನ ಬಳಿ ಹಣವಿಲ್ಲ, ನಾಳೆ ನೀಡುವುದಾಗಿ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಆರೋಪಿ, ಅಣ್ಣಪ್ಪ ಅವರನ್ನು ನಿಂದಿಸಿ, ಹಿಂಬದಿಯಿಂದ ಬಂದು ಕೈಯಲ್ಲಿದ್ದ ಗಾಜಿನ ಬಾಟಲಿಯಿಂದ ತಲೆಗೆ ಹೊಡೆದಿದ್ದಾನೆ. ಗಾಯಗೊಂಡಿದ್ದ ಅಣ್ಣಪ್ಪ ಅವರನ್ನು ಕೂಡಲೆ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಲಾಯಿತು. ಘಟನೆ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.