ಶಿವಮೊಗ್ಗದಲ್ಲಿ ರೊಚ್ಚಿಗೆದ್ದ ರೈತರು, ಸಿಟಿಯ ವಿವಿಧೆಡೆ ರಸ್ತೆಗಳಲ್ಲಿ ಟ್ರಾಕ್ಟರ್‌ ನಿಲ್ಲಿಸಿ ಆಕ್ರೋಶ, ಟ್ರಾಫಿಕ್‌ ಜಾಮ್

ಶಿವಮೊಗ್ಗ: ಭದ್ರಾ ನಾಲೆಗೆ ನೀರು ಹರಿಸಬೇಕು ಎಂದು ರೈತರು ನಡೆಸುತ್ತಿದ್ದ ಪ್ರತಿಭಟನೆ, ಸಂಜೆ ಬಳಿಕ ವಿಕೋಪಕ್ಕೆ ತಿರುಗಿತು. ರೊಚ್ಚಿಗೆದ್ದ ರೈತರು ನಗರದ ವಿವಿಧ ರಸ್ತೆಗಳು, ಸರ್ಕಲ್‌ಗಳಲ್ಲಿ ಟ್ರಾಕ್ಟರ್‌ಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಶಿವಮೊಗ್ಗ ನಗರದಲ್ಲಿ ಸಂಜೆ ವೇಳೆಗೆ ಭಾರಿ ಸಂಚಾರ ದಟ್ಟಣೆ ಉಂಟಾಯಿತು. (ಈ ಸುದ್ದಿಯನ್ನು ಇನ್ನು 88 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ರೈತರು ದಿಢೀರ್‌ ಸಿಟ್ಟಾಗಿದ್ದು ಏಕೆ?

ಭದ್ರಾ ನಾಲೆಗಳಿಗೆ ನೀರು ಹರಿಸುವ ಕುರಿತು ಸಂಜೆ ವೇಳೆಗೆ ಆದೇಶ ನೀಡಬೇಕು ಎಂದು ರೈತರು ಗಡುವು ನೀಡಿದ್ದರು. ಆದರೆ ಜಿಲ್ಲಾಧಿಕಾರಿ ಅವರು ಇಂದು ಸರ್ಕಾರಕ್ಕೆ ಬರೆದಿರುವ ಪತ್ರದ ಪ್ರತಿ ಮಾತ್ರ ಸಂಜೆ 4 ಗಂಟೆಗೆ ರೈತರ ಕೈ ಸೇರಿತ್ತು. ಇದರಿಂದ ಆಕ್ರೋಶಗೊಂಡ ರೈತರು ಪ್ರತಿಭಟನೆ ಮುಂದುವರೆಸುವ ನಿರ್ಧಾರ ಕೈಗೊಂಡರು. ಕೆಲವು ರೈತರು ಉಪವಾಸ ಸತ್ಯಾಗ್ರಹ, ಅಹೋರಾತ್ರಿ ಧರಣಿ ಮುಂದುವರೆಸಲು ನಿರ್ಧರಿಸಿದರು. ಆದರೆ ಇನ್ನು ಕೆಲವರು ಶಿವಮೊಗ್ಗ ಸಿಟಿಯ ವಿವಿಧೆಡೆ ರಸ್ತೆ ತಡೆ ನಡೆಸುವುದಾಗಿ ತಿಳಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಹೊರ ನಡೆದರು.

Farmers-Protest-for-Bhadra-River-Water-at-Mahaveera-Circle

ಸಿಕ್ಕ ಸಿಕ್ಕಲ್ಲಿ ಟ್ರಾಕ್ಟರ್‌ ನಿಲ್ಲಿಸಿದರು

ಜಿಲಾಧಿಕಾರಿ ಕಚೇರಿ ಆವರಣದಿಂದ ಹೊರ ಬಂದ ರೈತರ ಪೈಕಿ ಕೆಲವು ಟ್ರಾಕ್ಟರ್‌ ಚಾಲಕರು ಅಡ್ಡಾದಿಡ್ಡಿ ಟ್ರಾಕ್ಟರ್‌ ಚಲಾಯಿಸಿದರು. ಓರ್ವ ಚಾಲಕ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಡಿವೈಡರ್‌ ಮೇಲೆಯೇ ಟ್ರಾಕ್ಟರ್‌ ಹಾರಿಸಿದರು. ಇದರಿಂದ ಕೆಲವು ಕ್ಷಣ ಆತಂಕದ ವಾತಾವರಣ ಉಂಟಾಯಿತು.

ಮಹಾವೀರ ಸರ್ಕಲ್‌ನಲ್ಲಿ ಸುತ್ತಲು ಟ್ರಾಕ್ಟರ್‌ ನಿಲ್ಲಿಸಿ ರಸ್ತೆ ತಡೆ ಮಾಡಿದರು. ಕೆಲವು ರೈತರು ಬಸ್‌ ನಿಲ್ದಾಣದ ಪಕ್ಕದ ಅಶೋಕ ವೃತ್ತ, ಕರ್ನಾಟಕ ಸಂಘ, ಹೊಳೆ ಬಸ್‌ ನಿಲ್ದಾಣ, ವಿದ್ಯಾನಗರದ ಸೇತುವೆಗಳ ಬಳಿ ರಸ್ತೆಗೆ ಟ್ರಾಕ್ಟರ್‌ಗಳನ್ನು ಅಡ್ಡ ನಿಲ್ಲಿಸಿ ಪ್ರತಿಭಟನೆ ನಡೆಸಿದರು. ಭದ್ರಾ ನೀರು ಹರಿಸುವ ತನಕ ಕದಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗ ಸಿಟಿಯಲ್ಲಿ ಟ್ರಾಫಿಕ್‌ ಜಾಮ್‌

ರೈತರು ದಿಢೀರ್‌ ರಸ್ತೆ ತಡೆ ಮಾಡಿದ್ದರಿಂದ ಶಿವಮೊಗ್ಗ ಸಿಟಿಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಯಿತು. ಶಾಲೆ, ಕಾಲೇಜುಗಳು, ಕಚೇರಿಗಳಿಂದ ಮನೆಯತ್ತ ಧಾವಿಸುತ್ತಿದ್ದವರು ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿದರು. ಪೊಲೀಸರು ಮಧ್ಯಪ್ರವೇಶಿಸಿ ರೈತರನ್ನು ಸಮಾಧಾನಪಡಿಸಿದರು. ಬಳಿಕ ರೈತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗಕ್ಕೆ ಟ್ರಾಕ್ಟರ್‌ಗಳನ್ನು ತಂದು ನಿಲಿಸಿದರು. ಸದ್ಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಸವಳಂಗ ರಸ್ತೆಯಲ್ಲಿ ವಾಹನ ಸಂಚಾರ ಬಂದ್‌ ಮಾಡಲಾಗಿದೆ. ರೈತರು ರಸ್ತೆಯ ಎರಡು ಬದಿ ಟ್ರಾಕ್ಟರ್‌ಗಳನ್ನು ನಿಲ್ಲಿಸಿದ್ದಾರೆ. ಅಹೋರಾತ್ರಿ ಪ್ರತಿಭಟನೆ ಮುಂದುವರೆದಿದೆ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: