ತೀರ್ಥಹಳ್ಳಿ: ಕಲ್ಲು ಗಣಿಗಾರಿಕೆ ನಡೆಸುವ ಬಡ ಕಾರ್ಮಿಕರು ಹಾಗೂ ಗುತ್ತಿಗೆದಾರರ ಮೇಲೆ ಗಣಿ ಇಲಾಖೆ, ಪೊಲೀಸ್ ಹಾಗೂ ತಾಲ್ಲೂಕು ಆಡಳಿತ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ಮೇಲಿನಕುರುವಳ್ಳಿಯಿಂದ ತೀರ್ಥಹಳ್ಳಿಯ ಪೊಲೀಸ್ ಠಾಣೆಯವರೆಗೆ ಪಾದಯಾತ್ರೆ ನಡೆಯಿತು. (ಈ ಸುದ್ದಿಯನ್ನು ಇನ್ನು 50 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಪಾದಯಾತ್ರೆಯ ನೇತೃತ್ವ ವಹಿಸಿ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ, ‘ಅಧಿಕಾರಿಗಳು ಲಂಚ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಗುತ್ತಿಗೆದಾರರಿಗೆ ₹1.25 ಕೋಟಿವರೆಗೂ ದಂಡ ವಿಧಿಸುತ್ತಿದ್ದಾರೆ. ₹5 ಲಕ್ಷ ಬೆಲೆ ಬಾಳದ ಲಾರಿಗೆ ₹6 ಲಕ್ಷಕ್ಕೂ ಹೆಚ್ಚು ದಂಡ ಹಾಕಿ ಜಿಪಿಎಸ್ ಲಾಕ್ ಮಾಡುತ್ತಿದ್ದಾರೆ. ಬಡ ಕಾರ್ಮಿಕರ ಮೇಲೆ ವಿನಾಕಾರಣ ಪ್ರಕರಣ ದಾಖಲಿಸುತ್ತಿದ್ದು, ದುರುದ್ದೇಶದಿಂದ ಹಾಕಿರುವ ಎಫ್ಐಆರ್ಗಳನ್ನು ರದ್ದುಪಡಿಸಿ ತಕ್ಷಣವೇ ಬಿ-ರಿಪೋರ್ಟ್ ಸಲ್ಲಿಸಬೇಕು’ ಎಂದು ಆಗ್ರಹಿಸಿದರು.

ಹಲವು ವರ್ಷಗಳಿಂದ ಗುತ್ತಿಗೆ ಪ್ರಕ್ರಿಯೆ ನಡೆಸದೆ ಆಡಳಿತವೇ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿದೆ. ಸಕ್ರಮವಾಗಿ ಗಣಿಗಾರಿಕೆ ನಡೆಸುವವರಿಗೂ ಕಿರುಕುಳ ನೀಡಲಾಗುತ್ತಿದೆ. ಅಧಿಕಾರಿಗಳು ರೌಡಿಗಳಂತೆ ವರ್ತಿಸುತ್ತಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸುವುದನ್ನು ನಿಲ್ಲಿಸಬೇಕು. ಸ್ಥಳೀಯ ಸಂಘಗಳಿಗೆ ಗಣಿಗಾರಿಕೆ ಪರವಾನಗಿ ನೀಡಬೇಕು ಎಂಬ ನಿಯಮವಿದ್ದರು ಅದ್ದನ್ನು ಪಾಲಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಡಿ.ಎಸ್. ವಿಶ್ವನಾಥ ಶೆಟ್ಟಿ, ಹಾರೋಗೊಳಿಗೆ ಪದ್ಮನಾಭ್, ಅಮರನಾಥ ಶೆಟ್ಟಿ, ನಿಶ್ಚಲ್ ಜಾದೂಗಾರ್, ಗೀತಾ ರಾಘವೇಂದ್ರ, ಜಫ್ರುಲ್ಲಾ, ಗೀತಾ ರಮೇಶ್, ಜಯಕರ ಶೆಟ್ಟಿ, ಫಣಿರಾಜ್ ಮತ್ತಿತರರು ಭಾಗವಹಿಸಿದ್ದರು.