ಶಿವಮೊಗ್ಗ: ಸೋಗಾನೆ ವಿಮಾನ ನಿಲ್ದಾಣಕ್ಕೆ ಸ್ಥಗಿತಗೊಂಡಿರುವ ವಿಮಾನ ಸೇವೆಯನ್ನು ತಕ್ಷಣ ಪುನರಾರಂಭಿಸಲು ರಾಜ್ಯ ಸರ್ಕಾರ ಕಾರ್ಯಸಾಧ್ಯತಾ ಅಂತರ ನಿಧಿ (ವಿಜಿಎಫ್) ನೆರವು ನೀಡಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಬಿ. ಗೋಪಿನಾಥ್ ಆಗ್ರಹಿಸಿದರು. (ಈ ಸುದ್ದಿಯನ್ನು ಇನ್ನು 88 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.20ರಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ವಿಮಾನಗಳ ಹಾರಾಟ ಸ್ಥಗಿತಗೊಂಡಿರುವುದು ಆತಂಕಕಾರಿ ಬೆಳವಣಿಗೆ. ಕಳೆದ ಮೂರು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿಮಾನ ನಿಲ್ದಾಣದ ಮೂಲಕ ಇದುವರೆಗೆ ಸುಮಾರು 4.2 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಮಲೆನಾಡು ಹಾಗೂ ಮಧ್ಯ ಕರ್ನಾಟಕದ ಜನರಿಗೆ ವಾಯುಯಾನ ಸಂಪರ್ಕ ಕಲ್ಪಿಸುವಲ್ಲಿ ವಿಮಾನ ನಿಲ್ದಾಣ ಮಹತ್ವದ ಪಾತ್ರ ವಹಿಸಿದೆ ಎಂದರು.

ಉಡಾನ್ ಯೋಜನೆಯಡಿ ವಿಮಾನ ಸೇವೆ ಸ್ಥಗಿತಗೊಂಡಿದ್ದರೂ, ಕೇಂದ್ರ ಸರ್ಕಾರದ ಉಡಾನ್ 6.0 ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಸೇರ್ಪಡೆಯಾಗಿರುವುದು ಆಶಾದಾಯಕ ಬೆಳವಣಿಗೆ. ಇದಕ್ಕಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರಯತ್ನಗಳನ್ನು ಅಭಿನಂದಿಸಿದರು.
ಆರು ತಿಂಗಳ ವಿಜಿಎಫ್ ಬೇಕು
ಉಡಾನ್ 6.0 ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ನಾಲ್ಕರಿಂದ ಆರು ತಿಂಗಳು ಬೇಕಾಗಬಹುದು. ಈ ಅವಧಿಯಲ್ಲಿ ವಿಮಾನ ಸೇವೆ ಸಂಪೂರ್ಣ ಸ್ಥಗಿತಗೊಂಡರೆ ಕೈಗಾರಿಕೆ, ವ್ಯಾಪಾರ, ಪ್ರವಾಸೋದ್ಯಮ ಹಾಗೂ ತುರ್ತು ವೈದ್ಯಕೀಯ ಸೇವೆಗಳಿಗೆ ತೊಂದರೆಯಾಗಲಿದೆ. ಆದ್ದರಿಂದ ಮಧ್ಯಂತರ ವ್ಯವಸ್ಥೆಯಾಗಿ ರಾಜ್ಯ ಸರ್ಕಾರ VGF ನೆರವು ನೀಡಬೇಕು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಕೆಎಸ್ಐಐಡಿಸಿ ಅಧ್ಯಕ್ಷ ಸಿ.ಎಂ. ಧನಂಜಯ ಅವರಿಗೆ ಮನವಿ ಮಾಡಿದರು.
ಬೆಂಗಳೂರು, ಹೈದರಾಬಾದ್ ಮಾರ್ಗ ಆರಂಭಿಸಿ
ಒಂದು ವಿಮಾನ ಮಾರ್ಗಕ್ಕೆ ವಾರ್ಷಿಕವಾಗಿ ಸುಮಾರು ₹14 ಕೋಟಿ ವೆಚ್ಚವಾಗಲಿದೆ. ಶಿವಮೊಗ್ಗಕ್ಕೆ ನಾಲ್ಕು ಮಾರ್ಗಗಳ ಅಗತ್ಯವಿದ್ದರೂ, ತಕ್ಷಣದ ಆದ್ಯತೆಯಾಗಿ ಶಿವಮೊಗ್ಗ–ಬೆಂಗಳೂರು ಮತ್ತು ಶಿವಮೊಗ್ಗ–ಹೈದರಾಬಾದ್ ಮಾರ್ಗಗಳಲ್ಲಿ ವಿಮಾನ ಸೇವೆ ಆರಂಭಿಸಬೇಕು. ಕಲಬುರಗಿ ಮತ್ತು ಬೀದರ್ ವಿಮಾನ ನಿಲ್ದಾಣಗಳಲ್ಲಿ ಮುಂದುವರಿಸಿರುವ ರೀತಿಯಲ್ಲಿ ಶಿವಮೊಗ್ಗದಲ್ಲಿಯೂ ಈ ಸೌಲಭ್ಯ ಕಲ್ಪಿಸಬೇಕು ಎಂದು ಬಿ. ಗೋಪಿನಾಥ್ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಎನ್. ಸುರೇಶ್, ಖಜಾಂಚಿ ಆರ್. ಮನೋಹರ್, ನಿರ್ದೇಶಕರಾದ ರುದ್ರೇಶ್, ಶಿವಕುಮಾರ್, ಶರತ್, ಗಣೇಶ್, ಡಾ. ಲಕ್ಷ್ಮೀದೇವಿ ಗೋಪಿನಾಥ್, ರಾಜಶೇಖರ್, ಉದಯ್, ಶಂಕರ್, ಜಿ.ವಿಜಯಕುಮಾರ್ ಇದ್ದರು.