ಶಿವಮೊಗ್ಗ: ‘ಖಾಸಗಿ ಆಸ್ಪತ್ರೆಗಳು ತಾವು ಒದಗಿಸುವ ಪ್ರತಿ ಚಿಕಿತ್ಸೆಯ ದರವನ್ನು ಸಾರ್ವಜನಿಕರಿಗೆ ಕಾಣುವಂತೆ ಕಡ್ಡಾಯವಾಗಿ ಪ್ರಕಟಿಸಬೇಕು. ಈ ನಿಯಮ ಪಾಲಿಸದ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಎಚ್ಚರಿಕೆ ನೀಡಿದರು. (ಈ ಸುದ್ದಿಯನ್ನು ಇನ್ನು 71 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಗೆ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ‘ಈಗಾಗಲೇ ಚಿಕಿತ್ಸಾ ದರಪಟ್ಟಿ ಪ್ರದರ್ಶಿಸಿರುವ ಆಸ್ಪತ್ರೆಗಳ ಮಾಹಿತಿ ಪಡೆದು ಮಾದರಿ ಪರಿಶೀಲಿಸಲಾಗುವುದು. ಅದರಂತೆ ಜಿಲ್ಲೆಯ ಉಳಿದ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲೂ ದರಪಟ್ಟಿ ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆʼ ಎಂದರು.

ಸಚಿವ ಖಾದರ್ ಏನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್

ಟೆಂಡರ್ ಪ್ರಕ್ರಿಯೆ ವಿಳಂಬದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಂಟಾಗಿರುವ ಔಷಧ ಕೊರತೆ ನೀಗಿಸಲು, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ತುರ್ತಾಗಿ ಅಗತ್ಯ ಔಷಧ ಖರೀದಿಸಿ ಪೂರೈಸಲು ಆದೇಶಿಸಲಾಗಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕನಿಷ್ಠ 10 ವೈಲ್, ತಾಲೂಕು ಆಸ್ಪತ್ರೆಗಳಲ್ಲಿ 30 ವೈಲ್ ಹಾಗೂ ಜಿಲ್ಲಾ ಉಗ್ರಾಣಗಳಲ್ಲಿ ಅಗತ್ಯ ಪ್ರಮಾಣದ ಹಾವಿನ ಕಡಿತದ ಔಷಧ ಕಡ್ಡಾಯವಾಗಿ ದಾಸ್ತಾನು ಇರಬೇಕು.

ಮೆಗ್ಗಾನ್ ಆಸ್ಪತ್ರೆಯನ್ನು ವೈದ್ಯಕೀಯ ಕಾಲೇಜಿಗೆ ನೀಡಿರುವುದರಿಂದ, ಶಿವಮೊಗ್ಗ ನಗರದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪ್ರತ್ಯೇಕ ಜಿಲ್ಲಾ ಸರ್ಕಾರಿ ಆಸ್ಪತ್ರೆ ಸ್ಥಾಪಿಸಲು ಸರ್ಕಾರ ಶೀಘ್ರ ತೀರ್ಮಾನ ಕೈಗೊಳ್ಳಲಿದೆ.

ಜಿಲ್ಲೆಯಲ್ಲಿ ಅರ್ಹತೆ ಇಲ್ಲದೆ ಚಿಕಿತ್ಸೆ ನೀಡುವ ನಕಲಿ ವೈದ್ಯರು ತಕ್ಷಣವೇ ರಾಜ್ಯ ತೊರೆಯಬೇಕು. ಇಲ್ಲವಾದಲ್ಲಿ ಕ್ರಿಮಿನಲ್ ಮೊಕದ್ದಮೆ ಎದುರಿಸಬೇಕಾಗುತ್ತದೆ.

ಆಯುರ್ವೇದ ವೈದ್ಯರು ತಮಗೆ ಅನುಮತಿಸಲಾದ ಔಷಧಗಳನ್ನು ಮಾತ್ರ ನೀಡಬೇಕು. ನಿಯಮ ಮೀರಿ ಇಂಜೆಕ್ಷನ್ ಅಥವಾ ಇತರೆ ಅಲೋಪಥಿ ಚಿಕಿತ್ಸೆ ನೀಡುವಂತಿಲ್ಲ.

ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ತಲಾ 10 ಹಾಸಿಗೆಗಳ ವಿಶೇಷ ವಾರ್ಡ್ ಕಾಯ್ದಿರಿಸಲಾಗಿದ್ದು, ಅರಣ್ಯದ ಅಂಚಿನ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಜಾಗೃತಿ ಕಾರ್ಯಕ್ರಮ ನಡೆಸಲು ಸೂಚಿಸಲಾಗಿದೆ.
JOB NEWS
