ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 18 ಜನವರಿ 2020
ಶಾಲಾ ಕಾಲೇಜುಗಳನ್ನು ಹೊರತುಪಡಿಸಿ ಹೊರಗಿರುವ ಯುವ ಮತದಾರರ ನೋಂದಣಿಗೆ ವಿಶೇಷ ಗಮನ ಹರಿಸುವ ಅಗತ್ಯವಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್ ಅವರು ತಿಳಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ಸಂಜೀವ್ ಕುಮಾರ್, ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭ, ಶಾಲಾ ಕಾಲೇಜುಗಳಿಗೆ ಹೆಚ್ಚಿನ ಆದ್ಯತೆ ನೀಡಿ ಅರ್ಹ ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಗೆ ಸೇರಿಸುವ ಕಾರ್ಯ ನಡೆಸಲಾಗಿದೆ. ಇದೇ ವೇಳೆ ಕಾಲೇಜಿನಿಂದ ಹೊರಗೆ ಉಳಿದಿರುವ ಮತದಾರರ ನೋಂದಣಿಗೆ ಕ್ರಮ ಕೈಗೊಳ್ಳಬೇಕು. ಮನೆ ಮನೆ ಸಮೀಕ್ಷೆ ಸಂದರ್ಭದಲ್ಲಿ ಹೈಸ್ಕೂಲ್ ಶೈಕ್ಷಣಿಕ ದತ್ತಾಂಶವನ್ನು ಆಧರಿಸಿ ಯುವ ಮತದಾರರನ್ನು ಗುರುತಿಸ ಬೇಕು ಎಂದು ಅವರು ಹೇಳಿದರು.
ಮತದಾರರ ಪಟ್ಟಿಯಲ್ಲಿ ನೋಂದಣಿ, ಬದಲಾವಣೆ ಇತ್ಯಾದಿಗಳಿಗಾಗಿ ಸಲ್ಲಿಸಲಾಗಿರುವ ಎಲ್ಲಾ ಅರ್ಜಿಗಳನ್ನು ಆದ್ಯತೆ ಮೇರೆಗೆ ಪರಿಶೀಲಿಸಿ ವಿಲೇವಾರಿ ಮಾಡಬೇಕು. ಸೊರಬ ವಿಧಾನಸಭಾ ಕ್ಷೇತ್ರದಲ್ಲಿ 1008 ಪುರುಷ ಮತದಾರರಿಗೆ 970 ಮಹಿಳಾ ಮತದಾರರ ಅನುಪಾತವಿದೆ. ಲಿಂಗ ಅನುಪಾತದಲ್ಲಿ ಇಷ್ಟು ವ್ಯತ್ಯಾಸ ಬರಲು ಕಾರಣವೇನು ಎಂದು ಪರಿಶೀಲಿಸಿ ಸರಿಪಡಿಸಬೇಕು ಎಂದು ಅವರು ಸೂಚಿಸಿದರು.
ಮತದಾರರ ಪಟ್ಟಿಯಿಂದ ಯಾವುದೇ ಮತದಾರರ ಹೆಸರನ್ನು ತೆಗೆದು ಹಾಕುವ ಸಂದರ್ಭದಲ್ಲಿ ಬಿಎಲ್ಒಗಳು ಖುದ್ದಾಗಿ ಆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿರಬೇಕು. ಖುದ್ದಾಗಿ ಪರಿಶೀಲಿಸದೆ ಹೆಸರು ತೆಗೆದು ಹಾಕಿ ಗೊಂದಲಕ್ಕೆ ಅವಕಾಶ ಮಾಡಬಾರದು. ವಲಸೆ ಹೋಗಿರುವ, ನೀಡಿರುವ ವಿಳಾಸದಲ್ಲಿ ಇಲ್ಲದಿರುವ ಮತದಾರರನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ರಾಷ್ಟ್ರೀಯ ಮತದಾರರ ದಿನಾಚರಣೆ ಸಂದರ್ಭದಲ್ಲಿ ಮಾತ್ರವಲ್ಲದೆ, ಇತರ ಸರ್ಕಾರಿ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಸಹ ಮತದಾರರ ನೋಂದಣಿಗೆ ಬೀದಿನಾಟಕದಂತಹ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿ 18,49,268 ಜನಸಂಖ್ಯೆಯಿದ್ದು, 14,38,694 ಮತದಾರರಿದ್ದಾರೆ. ಜನಸಂಖ್ಯೆ ಮತ್ತು ಮತದಾರರ ಅನುಪಾತ ಶೇ.77.29ರಷ್ಟಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಅಪರ ಜಿಲ್ಲಾಧಿಕಾರಿ ಅನುರಾಧ, ನಗರ ಯೋಜನಾ ನಿರ್ದೇಶಕ ಡಾ.ನಾಗೇಂದ್ರ ಹೊನ್ನಳ್ಳಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]