ಶಿವಮೊಗ್ಗ: ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದುಹೋಗಿದ್ದ ಮೊಬೈಲ್ ಫೋನ್‌ಗಳನ್ನು ಪತ್ತೆ ಹಚ್ಚಿ ಇಂದು ವಾರಸುದಾರರಿಗೆ ಒಪ್ಪಿಸಲಾಯಿತು. ಸುಮಾರು ₹20 ಲಕ್ಷ ಮೌಲ್ಯದ 100 ಮೊಬೈಲ್ ಫೋನ್‌ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.
ದೊಡ್ಡಪೇಟೆ ಪೊಲೀಸ್ ಠಾಣೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್ ಅವರು ವಾರಸುದಾರರಿಗೆ ಮೊಬೈಲ್ ಫೋನ್‌ಗಳನ್ನು ವಿತರಿಸಿದರು.

ಸಿಇಐಆರ್ ಪೋರ್ಟಲ್ ನೆರವು
ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾ ರಕ್ಷಣಾಧಿಕಾರಿ ಬಿ. ನಿಖಿಲ್ ಅವರು, “ದೊಡ್ಡಪೇಟೆ ಠಾಣೆ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ, ಕೇಂದ್ರ ಸರ್ಕಾರದ ಸಿಇಐಆರ್ (CEIR) ಪೋರ್ಟಲ್ ನೆರವಿನಿಂದ ಈ ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಒಂದು ಹಾಗೂ ಎರಡು ವರ್ಷಗಳ ಹಿಂದೆ ಕಳೆದುಹೋಗಿದ್ದ ಫೋನ್‌ಗಳೂ ಸೇರಿವೆ” ಎಂದರು.
“ಬಸ್ ನಿಲ್ದಾಣ, ಬಟ್ಟೆ ಅಂಗಡಿಗಳು ಹಾಗೂ ಬೈಕ್‌ನಲ್ಲಿ ಸಂಚರಿಸುವಾಗ ಸಾರ್ವಜನಿಕರು ಮೊಬೈಲ್ ಕಳೆದುಕೊಂಡಿದ್ದರು. ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳುನಾಡು ಹಾಗೂ ಉತ್ತರ ಪ್ರದೇಶ ರಾಜ್ಯಗಳಿಗೆ ಸಾಗಿದ್ದ ಮೊಬೈಲ್‌ಗಳನ್ನು ಕೂಡ ಪೊಲೀಸರು ಪತ್ತೆ ಹಚ್ಚಿ ವಾಪಸ್ ತರಿಸಿದ್ದಾರೆ. ಜಿಲ್ಲೆಯಲ್ಲಿ ಈ ವರ್ಷದ ಜನವರಿಯಿಂದ ಈವರೆಗೆ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸುಮಾರು 1,000 ಮೊಬೈಲ್ ಫೋನ್‌ಗಳನ್ನು ಪತ್ತೆ ಹಚ್ಚಿ ವಾರಸುದಾರರಿಗೆ ನೀಡಲಾಗಿದೆ. ಆದರೆ, ದೊಡ್ಡಪೇಟೆ ಠಾಣೆಯೊಂದರಲ್ಲೇ ಒಂದೇ ಬಾರಿಗೆ 100 ಫೋನ್‌ಗಳನ್ನು ರಿಕವರಿ ಮಾಡಲಾಗಿದೆ” ಎಂದು ಅವರು ಶ್ಲಾಘಿಸಿದರು.
ಸಿಇಐಆರ್ ಪೋರ್ಟಲ್ ಬಳಸಿ
“ಮೊಬೈಲ್ ಕಳೆದುಕೊಂಡ ಸಾರ್ವಜನಿಕರು ನೇರವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಬಹುದು ಅಥವಾ ತಾವೇ ಸ್ವತಃ ಸಿಇಐಆರ್ ಪೋರ್ಟಲ್‌ನಲ್ಲಿ ಮೊಬೈಲ್‌ನ ಐಎಂಇಐ (IMEI) ಸಂಖ್ಯೆಯನ್ನು ದಾಖಲಿಸಿ ದೂರು ನೋಂದಾಯಿಸಬಹುದು. ಈ ಪೋರ್ಟಲ್ ಮೂಲಕ ಕಳುವಾದ ಫೋನ್‌ಗಳನ್ನು ಬೇರೆಯವರು ಬಳಸಿದ ತಕ್ಷಣ ಪೊಲೀಸರಿಗೆ ಮಾಹಿತಿ ಲಭ್ಯವಾಗುತ್ತದೆ. ಇದರಿಂದ ಮೊಬೈಲ್ ಪತ್ತೆ ಹಚ್ಚುವುದು ಸುಲಭವಾಗುತ್ತದೆ” ಎಂದು ಜಿಲ್ಲಾ ರಕ್ಷಣಾಧಿಕಾರಿ ಮಾಹಿತಿ ನೀಡಿದರು.
ಸಾರ್ವಜನಿಕ ಸ್ನೇಹಿ ತಂಗುದಾಣ ಉದ್ಘಾಟನೆ
ಇದೇ ಸಂದರ್ಭ ದೊಡ್ಡಪೇಟೆ ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರು ಹಾಗೂ ಸಂತ್ರಸ್ತರು ಕುಳಿತುಕೊಳ್ಳಲು ನಿರ್ಮಿಸಲಾಗಿರುವ ನೂತನ ತಂಗುದಾಣ, ಹೈಮಾಸ್ಟ್ ಲೈಟ್ ಅನ್ನು ಜಿಲ್ಲಾ ರಕ್ಷಣಾಧಿಕಾರಿ ಉದ್ಘಾಟಿಸಿದರು.
