ಮೂವರಿಗೆ 20 ವರ್ಷ ಜೈಲು ಶಿಕ್ಷೆ, ₹3.29 ಲಕ್ಷ ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್‌, ಏನಿದು ಕೇಸ್‌?

ಶಿವಮೊಗ್ಗ: ಅಪ್ರಾಪ್ತ ಬಾಲಕಿಯ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾದ ಹಿನ್ನೆಲೆ ಮೂವರು ಅಪರಾಧಿಗಳಿಗೆ ತಲಾ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹3.29 ಲಕ್ಷ ದಂಡ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. (ಈ ಸುದ್ದಿಯನ್ನು ಇನ್ನು 60 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

28 ವರ್ಷದ ಯುವಕನೊಬ್ಬ 17 ವರ್ಷದ ಬಾಲಕಿಯನ್ನು ಪ್ರೀತಿಸುವುದಾಗಿ ನಂಬಿಸಿ ಮನೆಯಿಂದ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಕೃತ್ಯಕ್ಕೆ 33 ವರ್ಷದ ವ್ಯಕ್ತಿಯೊಬ್ಬ ಕಾರು ಒದಗಿಸಿದ್ದ. 28 ವರ್ಷದ ಮತ್ತೊಬ್ಬ ವ್ಯಕ್ತಿ ಉಳಿಯಲು ಜಾಗ ನೆರವು ನೀಡಿದ್ದ. ಅಲ್ಲಿ ಯುವಕನು ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಈ ಸಂಬಂಧ ಮೂವರ ವಿರುದ್ಧ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪೋಕ್ಸೊ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

Shivamogga-Court-Building

ಶಿಕಾರಿಪುರ ಟೌನ್ ಇನ್ಸ್‌ಪೆಕ್ಟರ್‌ ರುದ್ರೇಶ್ ಕೆ.ಪಿ. ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ನಿಂಗನಗೌಡ ಬಿ. ಪಾಟೀಲ್ ಅವರು ಮೂವರು ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ಅಲ್ಲದೆ, ದಂಡದ ಮೊತ್ತದಿಂದ ₹3 ಲಕ್ಷ ಹಾಗೂ ಸರ್ಕಾರದ ವತಿಯಿಂದ ₹4 ಲಕ್ಷ ಸೇರಿ ಒಟ್ಟು ₹7 ಲಕ್ಷ ಪರಿಹಾರವನ್ನು ಸಂತ್ರಸ್ತ ಬಾಲಕಿಗೆ ನೀಡುವಂತೆ ಆದೇಶಿಸಲಾಗಿದೆ. ಸರ್ಕಾರದ ಪರವಾಗಿ ಅಭಿಯೋಜಕ ಶ್ರೀಧರ್ ವಾದ ಮಂಡಿಸಿದ್ದರು ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

(ಪೋಕ್ಸೋ ಪ್ರಕರಣಗಳಲ್ಲಿ ಸಂತ್ರಸ್ತೆಯ ಗುರುತು ಗೊತ್ತಾವಂತಹ ಯಾವುದೇ ವಿಷಯಗಳನ್ನು ಸುದ್ದಿಯಲ್ಲಿ ಪ್ರಕಟಿಸುವಂತಿಲ್ಲ. ಆದ್ದರಿಂದ ಆರೋಪಿಗಳ ಹೆಸರು, ವಿಳಾಸವನ್ನು ಕೂಡ ಪ್ರಕಟಿಸಿಲ್ಲ.)