ಶಿವಮೊಗ್ಗ ಟ್ರಾಫಿಕ್‌ ಪೊಲೀಸರ ದಿಢೀರ್‌ ಕಾರ್ಯಾಚರಣೆ, 74 ಬೈಕ್‌ ವಶಕ್ಕೆ, ಏನಿದು ಕೇಸ್‌?

ಶಿವಮೊಗ್ಗ: ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆಗಳಿಗೆ ಸಂಬಂಧಿಸಿದ ಇ–ಚಲನ್ ಹಾಗೂ ದಂಡದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ನಂಬರ್ ಪ್ಲೇಟ್ ಇಲ್ಲದೆ ಸಂಚರಿಸುತ್ತಿದ್ದ 74 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ನಗರದಾದ್ಯಂತ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾರ್ಯಾಚರಣೆ ವೇಳೆ ಈ ಕ್ರಮ ಕೈಗೊಳ್ಳಲಾಗಿದೆ. ಸಿಗ್ನಲ್ ಜಂಪಿಂಗ್, ಹೆಲ್ಮೆಟ್ ರಹಿತ ಚಾಲನೆ ಸೇರಿದಂತೆ ವಿವಿಧ ನಿಯಮ ಉಲ್ಲಂಘನೆಗಳು ಸ್ವಯಂಚಾಲಿತ ಕ್ಯಾಮೆರಾಗಳಲ್ಲಿ ದಾಖಲಾಗಿ ಇ–ಚಲನ್ ಜನರೇಟ್ ಆಗುವುದನ್ನು ತಪ್ಪಿಸಲು ಕೆಲವು ಸವಾರರು ತಮ್ಮ ವಾಹನಗಳ ನಂಬರ್ ಪ್ಲೇಟ್ ತೆಗೆದು ಅಥವಾ ಮರೆಮಾಚಿ ಸಂಚರಿಸುತ್ತಿರುವುದು ಕಂಡುಬಂದಿತ್ತು.

Traffic-Police-seized-74-bikes-with-no-number-plate

ಈ ಹಿನ್ನೆಲೆ ಕಾರ್ಯಾಚರಣೆ ನಡೆಸಿದ ಸಂಚಾರ ಠಾಣೆ ಪೊಲೀಸರು, 8 ಗಂಟೆಯಲ್ಲಿ 74 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಈ ವಾಹನಗಳ ಸವಾರರಿಗೆ ನೊಟೀಸ್‌ ನೀಡಿ, ದಂಡ ವಿಧಿಸಲಾಗಿದೆ. ಮುಂದೆ ಎಫ್‌ಐಆರ್‌ ದಾಖಲಿಸುವ ಎಚ್ಚರಿಕೆ ನೀಡಲಾಗಿದೆ.

ನಿರಂತರ ತಪಾಸಣೆಗೆ, ಎಫ್‌ಐಆರ್‌ ಎಚ್ಚರಿಕೆ

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ರಕ್ಷಣಾಧಿಕಾರಿ ಬಿ. ನಿಖಿಲ್, ‘ಸಂಚಾರ ನಿಯಮ ಉಲ್ಲಂಘಿಸಿ ದಂಡದಿಂದ ತಪ್ಪಿಸಿಕೊಳ್ಳಲು ನಂಬರ್ ಪ್ಲೇಟ್ ತೆಗೆದು ಸಂಚರಿಸುವುದು ಕಾನೂನುಬಾಹಿರ. ಇಂತಹ ಸವಾರರ ಪತ್ತೆಗೆ ನಗರದಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಒಂದೇ ದಿನ 74 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಈ ತಪಾಸಣೆ ನಿರಂತರವಾಗಿ ಮುಂದುವರಿಯಲಿದೆ. ಮುಂದೆ ಎಫ್‌ಐಆರ್‌ ದಾಖಲು ಮಾಡಲಾಗುತ್ತದೆ. ಆದ್ದರಿಂದ ಸಾರ್ವಜನಿಕರು ಕಡ್ಡಾಯವಾಗಿ ನಿಯಮಾನುಸಾರ ನಂಬರ್ ಪ್ಲೇಟ್ ಅಳವಡಿಸಿಕೊಂಡೇ ವಾಹನ ಚಲಾಯಿಸಬೇಕು’ ಎಂದು ಸೂಚನೆ ನೀಡಿದರು.

ಶಿವಮೊಗ್ಗ ಸಂಚಾರ ಠಾಣೆ ಇನ್ಸ್‌ಪೆಕ್ಟರ್‌ ದೇವರಾಜ್‌, ಸಬ್‌ ಇನ್ಸ್‌ಪೆಕ್ಟರ್‌ಗಳು, ಎಎಸ್‌ಐ ಮತ್ತು ಸಂಚಾರ ಠಾಣೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಮೊದಲೇ ವರದಿ ಮಾಡಿತ್ತು ಶಿವಮೊಗ್ಗ ಲೈವ್‌

ಇ-ಚಲನ್ ದಂಡದಿಂದ ತಪ್ಪಿಸಿಕೊಳ್ಳಲು ನಗರದಲ್ಲಿ ಕೆಲವು ಸವಾರರು ನಂಬರ್ ಪ್ಲೇಟ್‌ಗಳನ್ನು ಮರೆಮಾಚುತ್ತಿರುವ ಹಾಗೂ ಫಲಕಗಳಿಲ್ಲದೆ ರಾಜಾರೋಷವಾಗಿ ಸಂಚರಿಸುತ್ತಿರುವ ಕುರಿತು ‘ಶಿವಮೊಗ್ಗ ಲೈವ್’ ವೆಬ್‌ಸೈಟ್ ಈ ಹಿಂದೆಯೇ ವರದಿಗಳನ್ನು ಪ್ರಕಟಿಸಿತ್ತು. ಬೈಕ್‌ಗಳ ನಂಬರ್ ಪ್ಲೇಟ್‌ಗಳ ಮೇಲೆ ಸ್ಟಿಕ್ಕರ್ ಅಂಟಿಸಿ ನಂಬರ್ ಮರೆಮಾಚುವ ಕಿಡಿಗೇಡಿಗಳ ಕೃತ್ಯ ಹಾಗೂ ನಗರದಲ್ಲಿ ನಂಬರ್ ಪ್ಲೇಟ್ ಇಲ್ಲದ ಬೈಕ್‌ಗಳ ಹಾವಳಿ ಹೆಚ್ಚಾಗುತ್ತಿರುವ ಬಗ್ಗೆ ವರದಿಗಳ ಮೂಲಕ ಕಳಕಳಿ ವ್ಯಕ್ತಪಡಿಸಲಾಗಿತ್ತು.

ಶಿವಮೊಗ್ಗ JNNCE ಕಾಲೇಜಿನಲ್ಲಿ ADMISSION ಶುರು
JNNCE College Admission 2026
📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

ಶಿವಮೊಗ್ಗ ಲೈವ್ ಅಪ್ಡೇಟ್ಸ್

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಸೇರಿರಿ!