ಶಿವಮೊಗ್ಗದಲ್ಲಿ ಆರೋಪಿ ಕಾಲಿಗೆ ಗುಂಡು ಹಾರಿಸಿದ ಪೊಲೀಸ್‌, ಕಾರಣವೇನು?

ಶಿವಮೊಗ್ಗ: ರೌಡಿಶೀಟರ್ ಕಿರಣ್ ಅಲಿಯಾಸ್ ಕುಳ್ಳಿ ಕಿರಣ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. (ಶಿವಮೊಗ್ಗ ಲೈವ್‌.ಕಾಂ | ಮುಂದಿನ 5 ಪ್ಯಾರಾಗಳು ಕೆಳಗಿವೆ)

ಶಿವಮೊಗ್ಗ – ಎನ್.ಆರ್.ಪುರ ರಸ್ತೆಯ ಲಿಂಗಾಪುರ ಗ್ರಾಮದ ಬಳಿ ಘಟನೆ ನಡೆದಿದೆ. ಕಿರಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಮೇಶ್ ನಾಯ್ಕ್ (27) ಎಂಬಾತನನ್ನು ಬಂಧಿಸಲು ತುಂಗಾನಗರ ಪೊಲೀಸರು ಲಿಂಗಾಪುರ ಬಳಿ ತೆರಳಿದ್ದರು. ಆ ಸಂದರ್ಭ ಆರೋಪಿ ಉಮೇಶ್ ನಾಯ್ಕ್ ತಪ್ಪಿಸಿಕೊಳ್ಳಲು ಯತ್ನಿಸಿ ಪೊಲೀಸ್ ಸಿಬ್ಬಂದಿ ತಮ್ಮಣ್ಣ ಜಂಬಗಿ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

Shivamogga-SP-Nikhil-visit-Ramenakoppa-Spot

ಕಾಲಿಗೆ ಗುಂಡು ಹಾರಿಸಿದ ಇನ್ಸ್‌ಪೆಕ್ಟರ್‌

ಪರಾರಿಯಾಗಲು ಯತ್ನಿಸಿದ ಉಮೇಶ್‌ ನಾಯ್ಕ್‌ಗೆ ತುಂಗಾನಗರ ಇನ್ಸ್‌ಪೆಕ್ಟರ್‌ ಗುರುರಾಜ್ ಕರ್ಕಿ ಅವರು ಎಚ್ಚರಿಕೆ ನೀಡಿದ್ದಾರೆ. ಆದರೆ ಆರೋಪಿ ಉಮೇಶ್‌ ನಾಯ್ಕ್‌, ಪೊಲೀಸ್‌ ಸಬ್ಬಂದಿ ತಮ್ಮಣ್ಣ ಜಂಬಗಿ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಇನ್ಸ್‌ಪೆಕ್ಟರ್‌ ಗುರುರಾಜ್‌ ಕರ್ಕಿ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೂ ದಾಳಿ ಮುಂದುವರೆಸಿದ್ದರಿಂದ ಆರೋಪಿ ಉಮೇಶ್ ನಾಯ್ಕ್ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.

ಗಾಯಾಳುಗಳು ಆಸ್ಪತ್ರೆಗೆ ರವಾನೆ

ಘಟನೆಯಲ್ಲಿ ಗಾಯಗೊಂಡಿರುವ ಆರೋಪಿ ಉಮೇಶ್ ನಾಯ್ಕ್ ಹಾಗೂ ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿ ತಮ್ಮಣ್ಣ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಿಬ್ಬಂದಿ ತಮ್ಮಣ್ಣ ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಶಿವಮೊಗ್ಗದ ರಾಮೇನಕೊಪ್ಪದಲ್ಲಿ ಭಾನುವಾರ ಸಂಜೆ ಮಾರಕಾಸ್ತ್ರಗಳಿಂದ ಕೊಚ್ಚಿ ಕುಳ್ಳಿ ಕಿರಣನನ್ನು ಹತ್ಯೆ ಮಾಡಲಾಗಿತ್ತು.