ಶಿವಮೊಗ್ಗದಲ್ಲಿ ರೌಡಿಶೀಟರ್‌ ಬರ್ಬರ ಹತ್ಯೆ, ಜಿಲ್ಲಾ ರಕ್ಷಣಾಧಿಕಾರಿ ಫಸ್ಟ್‌ ರಿಯಾಕ್ಷನ್

ಶಿವಮೊಗ್ಗ: ತಾಲೂಕಿನ ರಾಮೇನಕೊಪ್ಪದಲ್ಲಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ರೌಡಿಶೀಟರ್‌ ಒಬ್ಬನನ್ನು ಹತ್ಯೆ ಮಾಡಲಾಗಿದೆ. ಮೃತನನ್ನು ಭಾರತಿ ನಗರದ ಕಿರಣ ಅಲಿಯಾಸ್‌ ಕುಳ್ಳಿ ಕಿರಣ ಎಂದು ಗುರುತಿಸಲಾಗಿದೆ.

ಇಂದು ಸಂಜೆ ಬೈಕ್‌ನಲ್ಲಿ ಬಂದ ಮೂರ್ನಾಲ್ಕು ಮಂದಿ ಆಯುಧಗಳಿಂದ ದಾಳಿ ನಡೆಸಿದ್ದಾರೆ. ಮುಖ ಮತ್ತು ಎದೆ ಭಾಗಕ್ಕೆ ಇರಿದಿದ್ದರಿಂದ ತೀವ್ರ ರಕ್ತಸ್ರಾವವಾಗಿ ಕುಳ್ಳಿ ಕಿರಣ ಕೊನೆಯುಸಿರೆಳೆದಿದ್ದಾನೆ. ದಾಳಿಗು ಮೊದಲು ದುಷ್ಕರ್ಮಿಗಳು ಕುಳ್ಳಿ ಕಿರಣನ ಜೊತೆಗೆ ಕೆಲವು ಹೊತ್ತು ಚರ್ಚೆ ನಡೆಸಿದ್ದರು. ಆ ನಂತರ ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಹಾಗಾಗಿ ಕುಳ್ಳಿ ಕಿರಣನ ಸಹಚರರೆ ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ.

Kulli-Kiran-Incident-at-Shimoga-city

ಸ್ಥಳಕ್ಕೆ ಪೊಲೀಸರು ದೌಡು

ಘಟನೆ ಬೆನ್ನಿಗೆ ಕುಳ್ಳಿ ಕಿರಣನನ್ನು ನಗರದ ಎನ್‌.ಹೆಚ್‌.ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ದಾಳಿಯ ತೀವ್ರತೆ ಮತ್ತು ರಕ್ತಸ್ರಾವದಿಂದಾಗಿ ಕಿರಣ ಕೊನೆಯುಸಿರೆಳೆದಿದ್ದಾನೆ. ವಿಷಯ ತಿಳಿದು ಆಸ್ಪತ್ರೆ ಮುಂಭಾಗ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು. ಸ್ಥಳಕ್ಕೆ ಆಗಮಿಸಿದ ತುಂಗಾ ನಗರ ಠಾಣೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು.

ಶವಾಗಾರಕ್ಕೆ ಮೃತದೇಹ ಶಿಫ್ಟ್‌

ಕುಳ್ಳಿ ಕಿರಣನ ಮೃತದೇಹವನ್ನು ಮೆಗ್ಗಾನ್‌ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಬಿ. ನಿಖಿಲ್‌ ಅವರು ಶವಾಗಾರಕ್ಕೆ ಭೇಟಿ ನೀಡಿ ಮೃತದೇಹವನ್ನು ಪರಿಶೀಲಿಸಿದರು. ಇದೇ ವೇಳೆ, ಘಟನೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಎಸ್‌ಪಿ ಏನೆಲ್ಲ ಹೇಳಿದರು? ಇಲ್ಲಿದೆ 4 ಪಾಯಿಂಟ್ಸ್‌

POINT-1

‘ಕಾಂಟ್ರಾಕ್ಟ್‌ ಮತ್ತು ಫೈನಾನ್ಸ್‌ ವ್ಯವಹಾರ ನಡೆಸುತ್ತಿದ್ದ ಕುಳ್ಳಿ ಕಿರಣನ ಮೇಲೆ ಮೂರ್ನಾಲ್ಕು ಮಂದಿ ರಾಮೇನಕೊಪ್ಪ ಭಾಗದಲ್ಲಿ ದಾಳಿ ನಡೆಸಿದ್ದಾರೆ. ಇದಕ್ಕೂ ಮುನ್ನ ದಾಳಿಕೋರರು ಸುಮಾರು 15 ನಿಮಷ ಈತನೊಂದಿಗೆ ಚರ್ಚೆ ನಡೆಸಿದ್ದರು ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆʼ ಎಂದು ಎಸ್‌ಪಿ ತಿಳಿಸಿದರು.  

POINT-2

‘ಕುಳ್ಳಿ ಕಿರಣನ ವಿರುದ್ಧ ಕೊಲೆ ಮತ್ತು ಕೊಲೆ ಯತ್ನ ಪ್ರಕರಣಳಿವೆ. ಈತನ ವಿರುದ್ಧ ಆರು ಪ್ರಕರಣಗಳು ದಾಖಲಾಗಿವೆ. ದೊಡ್ಡಪೇಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈತನ ಚಟುವಟಿಕೆ ಇತ್ತು. ಇತ್ತೀಚೆಗೆ ಈತ ಶಿವಮೊಗ್ಗ ಜಿಲ್ಲೆಯಿಂದ ಹೊರಗೆ ಹೆಚ್ಚಾಗಿ ಇರುತ್ತಿದ್ದ. ಆಗಾಗ ಶಿವಮೊಗ್ಗಕ್ಕೆ ಬಂದು ಹೋಗುತ್ತಿದ್ದ.ʼ

POINT-3

‘ಫೈನಾನ್ಸ್‌ ವಿಚಾರವಾಗಿ ನಡೆದ ಚರ್ಚೆಯ ನಂತರ ಕೊಲೆ ನಡೆದಿರುವ ಶಂಕೆ ಇದೆ. ಆದ್ದರಿಂದ ಈತನ ಸಹಚರರೇ ಕೃತ್ಯ ಎಸಗಿರುವ ಕುರಿತು ಅನುಮಾನವಿದೆ. ಆರೋಪಿಗಳ ಬಂಧನದ ನಂತರ ಘಟನೆಗೆ ಕಾರಣವೇನು ಎಂಬುದು ಸ್ಪಷ್ಟವಾಗಲಿದೆ.ʼ

POINT-4

‘ಕುಳ್ಳಿ ಕಿರಣನ ಗಡಿಪಾರು ಮಾಡಲು ಸಿದ್ಧತೆಯಾಗಿತ್ತು. ಹಾಗಾಗಿ ಆತನ ಚಟುವಟಿಕೆಗಳ ಮೇಲೆ ಪೊಲೀಸ್‌ ಇಲಾಖೆಯ ರೌಡಿ ನಿಗ್ರಹ ಪಡೆ ನಿಗಾ ವಹಿಸಿತ್ತು.ʼ