ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 13 JUNE 2023
ಕೇಸ್ 1
ಅಮೆರಿಕದ ವೈದ್ಯ ಡಾ.ಮಾರ್ಟಿನ್ ಫ್ಯಾಬಿನ್ ಎಂಬ ಹೆಸರಿನಲ್ಲಿ ಶಿವಮೊಗ್ಗದ 31 ವರ್ಷದ ಮಹಿಳೆಗೆ ಫೇಸ್ಬುಕ್ನಲ್ಲಿ ರಿಕ್ವೆಸ್ಟ್ (Friend Request) ಬಂದಿತ್ತು. ಆಗಾಗ ಮಹಿಳೆಯೊಂದಿಗೆ ಚಾಟಿಂಗ್ ಮಾಡಿದ್ದಾನೆ. ಈತನ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ ಮಹಿಳೆ ಕೊನೆಗೆ ಕಳೆದುಕೊಂಡಿದ್ದು 14 ಲಕ್ಷ ರೂ. ಹಣ. ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೇಸ್ 2
ಹೊಸನಗರ ತಾಲೂಕಿನ 37 ವರ್ಷದ ನರ್ಸ್ ಒಬ್ಬರಿಗೆ ಮಾರ್ಕ್ ಡೀಪ್ ಎಂಬ ಹೆಸರಿನಲ್ಲಿ ಫೇಸ್ ಬುಕ್ ಫ್ರೆಂಡ್ ರಿಕ್ವೆಸ್ಟ್ (Friend Request) ಬಂದಿತ್ತು. ಅಕ್ಸೆಪ್ಟ್ ಮಾಡಿದ್ದ ನರ್ಸ್ ಜೊತೆಗೆ ವ್ಯಕ್ತಿ ಸ್ವಲ್ಪ ದಿನ ಚಾಟಿಂಗ್ ಮಾಡಿದ್ದಾನೆ. ಕೊನೆಗೆ ನರ್ಸ್ ಕಳೆದುಕೊಂಡಿದ್ದು 16.66 ಲಕ್ಷ ರೂ. ಹಣ. ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ನರ್ಸ್ಗೆ ಫೇಸ್ಬುಕ್ ಸ್ನೇಹಿತ ಕೊಟ್ಟ ಶಾಕ್, ಕಂಗಾಲಾಗಿ ಪೊಲೀಸ್ ಠಾಣೆಗೆ ದೌಡು
ಕೇಸ್ 3
ಶಿವಮೊಗ್ಗ ನಗರದ 40 ವರ್ಷದ ಮಹಿಳೆಯೊಬ್ಬರಿಗೆ Drchinwe Joel ಹೆಸರಿನಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂದಿದೆ. ಅಕ್ಸೆಪ್ಟ್ ಮಾಡಿದ ಮಹಿಳೆ ಜೊತೆಗೆ Drchinwe Joel ಚಾಟಿಂಗ್ ಮಾಡಿದ್ದಾನೆ. ತಾನು ಲಂಡನ್ ದೇಶದಲ್ಲಿ ವೈದ್ಯ ಎಂದು ತಿಳಿಸಿದ್ದಾನೆ. ಕೊನೆಗೆ ಈ ಮಹಿಳೆ 6.50 ಲಕ್ಷ ರೂ. ಕಳೆದುಕೊಂಡಿದ್ದಾರೆ.]
ಮಹಿಳೆಯರನ್ನೆ ಗುರಿಯಾಗಿಸಿಕೊಂಡು ಆನ್ಲೈನ್ ಮೂಲಕ ವಂಚಿಸುವ ಜಾಲ ಮತ್ತೊಮ್ಮೆ ಸಕ್ರಿಯವಾಗಿದೆ. ಈವರೆಗೂ ಅನುಸರಿಸುತ್ತಿದ್ದ ಟ್ರಿಕ್ಗೆ ಹೊಸ ರೂಪ ನೀಡಿ, ಮಹಿಳೆಯರಿಗೆ ಆಸೆ ಹುಟ್ಟಿಸಿ ಲಕ್ಷ ಲಕ್ಷ ರೂ. ಹಣ ಪಡೆದು ಕೊನೆಗೆ ಟೋಪಿ ಹಾಕಲಾಗುತ್ತಿದೆ.
ಹೇಗೆ ನಡೆಯುತ್ತೆ ವಂಚನೆ?
ಮಹಿಳೆಯರ ಫೇಸ್ಬುಕ್ ಖಾತೆಗೆ ಅಪರಿಚಿತ ವ್ಯಕ್ತಿಯೊಬ್ಬನ ಫ್ರೆಂಡ್ ರಿಕ್ವೆಸ್ಟ್ (Friend Request) ಬರುತ್ತದೆ. ರಿಕ್ವೆಸ್ಟ್ ಅಕ್ಸೆಪ್ಟ್ ಮಾಡುತ್ತಿದ್ದಂತೆ ಚಾಟಿಂಗ್ ಆರಂಭಿಸುತ್ತಾರೆ. ಅತ್ತ ಕಡೆಯಿಂದ ಚಾಟಿಂಗ್ ಮಾಡುವಾತ ತನ್ನನ್ನು ಉತ್ತಮ ಹುದ್ದೆಯಲ್ಲಿರುವ ವಿದೇಶದಲ್ಲಿರುವ ಶ್ರೀಮಂತನಂತೆ ಬಿಂಬಿಸಿಕೊಳ್ಳುತ್ತಾನೆ. ಫೇಸ್ಬುಕ್ ಬದಲು ವಾಟ್ಸಪ್ನಲ್ಲಿ ಚಾಟಿಂಗ್, ಫೋನ್ ಕರೆ ಮಾಡಿ, ಮಹಿಳೆಯ ನಂಬಿಕೆ ಗಿಟ್ಟಿಸಿಕೊಳ್ಳುತ್ತಾನೆ. ನಂತರ ಅಸಲಿ ಆಟ ಶುರುವಾಗಲಿದೆ. ಚಿನ್ನಾಭರಣ, ಕಂತೆ ಕಂತೆ ಅಮೆರಿಕನ್ ಡಾಲರ್ ನೋಟುಗಳ ಫೋಟೊ ಕಳುಹಿಸುತ್ತಾರೆ. ಇದನ್ನು ಉಡುಗೊರೆಯಾಗಿ ಕಳುಹಿಸುತ್ತೇನೆ ಎಂದು ಮಹಿಳೆಯ ವಿಳಾಸ ಪಡೆದುಕೊಳ್ಳುತ್ತಾನೆ.
ಫೀಸ್ ಕಟ್ಟಬೇಕು ಅಂತಾ ಫೋನ್
ಒಂದೆರಡು ದಿನದಲ್ಲಿ ವಿಮಾನ ನಿಲ್ದಾಣದಿಂದ ಅಂತಲೋ, ಕಸ್ಟಮ್ಸ್ ಅಧಿಕಾರಿ ಅಂತಲೋ, ಟ್ಯಾಕ್ಸ್ ಪಾವತಿಸಬೇಕು ಟ್ಯಾಕ್ಸ್ ಅಧಿಕಾರಿ ಎಂದೋ ಮಹಿಳೆಗೆ ಫೋನ್ ಕರೆ ಬರಲಿದೆ. ಚಿನ್ನಾಭರಣ, ಕಂತೆ ಕಂತೆ ಡಾಲರ್ಗಳ ಆಸೆಯಿಂದ ಮಹಿಳೆಯರು ಮೊದಲಿಗೆ ಟ್ಯಾಕ್ಸ್ ಹಣ ಪಾವತಿಸುತ್ತಾರೆ. ಆ ನಂತರ ಪದೇ ಪದೆ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡುವ ವಂಚಕರು, ಆ ಟ್ಯಾಕ್ಸ್, ಈ ಟ್ಯಾಕ್ಸ್ ಎಂದು ಲಕ್ಷಾಂತರ ರೂ. ಹಣ ಕಟ್ಟಿಸಿಕೊಳ್ಳುತ್ತಾರೆ. ವಂಚನೆಗೊಳಗಾದ ಅರಿವಾಗುವಷ್ಟರಲ್ಲಿ ಮಹಿಳೆ ಲಕ್ಷಾಂತರ ರೂ. ಕಳೆದುಕೊಂಡಿರುತ್ತಾರೆ.
ಮಹಿಳೆಯರೆ ವಂಚಕರ ಟಾರ್ಗೆಟ್
ಗೃಹಿಣಿಯರು, ಸಣ್ಣಪುಟ್ಟ ಕೆಲಸದಲ್ಲಿರುವ ಮಹಿಳೆಯರನ್ನೆ ಟಾರ್ಗೆಟ್ ಮಾಡಲಾಗುತ್ತಿದೆ. ಇಂತಹ ಮಹಿಳೆಯರನ್ನು ಆಯ್ಕೆ ಮಾಡಿ ರಿಕ್ವೆಸ್ಟ್ ಕಳುಹಿಸಲಾಗುತ್ತದೆ. ರಾಜ್ಯದ ವಿವಿಧೆಡೆಯ ಮಹಿಳೆಯರು ಈ ವಂಚಕರ ಜಾಲಕ್ಕೆ ಬಿದ್ದಿದ್ದಾರೆ. ಇವರು ಒಡ್ಡುವ ಆಸೆ, ಆಮಿಷಕ್ಕೆ ಬಲಿಯಾಗಿ ಲಕ್ಷಾಂತರ ರೂ. ಕಳೆದುಕೊಂಡಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ KSRTC ಬಸ್ ಡೋರ್ನಲ್ಲಿ ನಿಂತು ಮಹಿಳೆಯರ ಪ್ರಯಾಣ, ಖಾಸಗಿ ಬಸ್ಗಳ ಪರಿಸ್ಥಿತಿ ಏನಾಗಿದೆ?
ದೂರು ಕೊಡಲು ಹಿಂದೇಟು
ವಂಚಕರ ಬಲೆಗೆ ಬಿದ್ದ ಕೆಲವೆ ಕೆಲವು ಮಹಿಳೆಯರು ದೂರು ನೀಡಿದ್ದಾರೆ. ವಂಚಕರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಹಣ ಕೊಡಿಸುವಂತೆ ಆಗ್ರಹಿಸಿದ್ದಾರೆ. ಇನ್ನೂ ಕೆಲವು ಮಹಿಳೆಯರು ಸಣ್ಣಪುಟ್ಟ ಮೊತ್ತ ಪಾವತಿಸಿ ಕೈ ಸುಟ್ಟುಕೊಂಡಿದ್ದಾರೆ. ಇಷ್ಟು ಮೊತ್ತಕ್ಕೆಲ್ಲ ದೂರು ನೀಡುವ ಅಗತ್ಯವಿಲ್ಲ ಎಂದು ಸುಮ್ಮಾನಾಗಿದ್ದಾರೆ. ಹಲವರು ಮರ್ಯಾದೆಗೆ ಅಂಜಿಕೊಂಡು ಪೊಲೀಸ್ ಠಾಣೆ ಮಟ್ಟಿಲೇರಲು ಹಿಂಜರಿಯುತ್ತಿದ್ದಾರೆ.
ಫೇಸ್ಬುಕ್, ಇನ್ಸ್ಟಾಗ್ರಾಂನಲ್ಲಿ ಬರುವ ರಿಕ್ವೆಸ್ಟ್ ಒಪ್ಪಿಕೊಳ್ಳುವಾಗ ಮುನ್ನೆಚ್ಚರಿಕೆ ವಹಿಸಬೇಕು. ಅಪರಿಚಿತರ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡದಿದ್ದರೆ ಉತ್ತಮ. ಚಾಟಿಂಗ್ ಮಾಡುವುದು, ಆಮಿಷಕ್ಕೆ ಮನಸೋಲದೆ ಇದ್ದರೆ ವಂಚಕರಿಂದ ತಪ್ಪಿಸಿಕೊಳ್ಳಬಹುದು.
ಇದನ್ನೂ ಓದಿ – ಮಹಿಳೆಯರಿಗೆ ಫ್ರೀ ಪ್ರಯಾಣ, ಶಿವಮೊಗ್ಗ ನಿಲ್ದಾಣದಲ್ಲಿ ಹೇಗಿದೆ ಪರಿಸ್ಥಿತಿ? ಯಾವೆಲ್ಲ ರೂಟ್ ಬಸ್ಗೆ ಇತ್ತು ಡಿಮಾಂಡ್?
ಮಹಿಳೆಯರನ್ನೆ ಗುರಿಯಾಗಿಸಿಕೊಂಡು ಆನ್ಲೈನ್ ಮೂಲಕ ವಂಚನೆ ಮಾಡುತ್ತಿರುವ ಜಾಲದ ಹೆಡೆಮುರಿ ಕಟ್ಟಬೇಕಿದೆ. ಇಲ್ಲವಾದಲ್ಲಿ ರಾಜ್ಯದ ಮತ್ತಷ್ಟು ಮಹಿಳೆಯ ಈ ವಂಚಕರಿಂದ ಲಕ್ಷಾಂತರ ರೂ. ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422