ಶಿವಮೊಗ್ಗ ಲೈವ್.ಕಾಂ | SHIMOGA NEWS | 5 ಆಗಸ್ಟ್ 2021
ಮಂಕಿ ಕ್ಯಾಪ್ ಧರಿಸಿಕೊಂಡು ಬಂದು ಮನೆಯೊಂದಕ್ಕೆ ನುಗ್ಗಿ ಹಾಡಹಗಲೆ ದರೋಡೆ ಮಾಡಲಾಗಿದೆ. ಮನೆಯಲ್ಲಿದ್ದ ಒಬ್ಬರಿಗೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ಯಾರಾದರೂ ಕಿರುಚಾಡಿದರೆ ಮಗುವನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಿ, ಹಣ, ಚಿನ್ನಾಭರಣ ಕದ್ದೊಯ್ಯಲಾಗಿದೆ.
ಶಿವಮೊಗ್ಗ ತಾಲೂಕು ಚಿಕ್ಕಮರಡಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಜಯಣ್ಣಗೌಡ ಎಂಬುವವರ ಮನೆಯಲ್ಲಿ ಘಟನೆ ನಡೆದಿದೆ. ಮಂಕಿ ಕ್ಯಾಪ್ ಧರಿಸಿ, ಎರಡು ಬೈಕ್’ನಲ್ಲಿ ಬಂದ ನಾಲ್ವರು ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹೇಗಾಯ್ತು ಘಟನೆ?
ಮಂಗಳವಾರ ಸಂಜೆ ಘಟನೆ ಸಂಭವಿಸಿದೆ. ಜಮೀನಿಗೆ ಹೋಗಿದ್ದ ಜಯಣ್ಣಗೌಡ ಅವರು ಮನೆಗೆ ಮರಳುತ್ತಿದ್ದಂತೆ ಬೈಕ್’ನಲ್ಲಿ ನಾಲ್ವರು ಮನೆ ಬಳಿಗೆ ಬಂದಿದ್ದಾರೆ. ಮಂಕಿ ಕ್ಯಾಪ್, ಜರ್ಕಿನ್ ಧರಿಸಿದ್ದ ನಾಲ್ವರು ಏಕಾಏಕಿ ಮನೆಯೊಳಗೆ ನುಗ್ಗಿದ್ದು, ಚಿನ್ನಾಭರಣ, ಹಣ ನೀಡುವಂತೆ ಬೆದರಿಸಿದ್ದಾರೆ. ಮುಸುಕುಧಾರಿಗಳು ಮನೆಯೊಳಗೆ ಪ್ರವೇಶಿಸುವುದನ್ನು ತಡೆಯಲು ಮುಂದಾದ ಜಯಣ್ಣ ಗೌಡ ಅವರಿಗೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ.
ಮನೆಯಲ್ಲಿದ್ದ ಜಯಣ್ಣ ಗೌಡ ಅವರ ಸೊಸೆಯ ಕೈ, ಕಾಲುಗಳನ್ನು ಕಟ್ಟಿ ಹಾಕಲಾಗಿದೆ. ಮಗುವನ್ನು ಹಿಡಿದುಕೊಂಡ ದರೋಡೆಕೋರರು, ಯಾರಾದರೂ ಕೂಗಾಡಿದರೆ ಮಗುವನ್ನು ಸಾಯಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ. ಇದೆ ವೇಳೆ ಜಮೀನಿಗೆ ಹೋಗಿದ್ದ ಜಯಣ್ಣ ಗೌಡ ಅವರ ಪತ್ನಿ ಹಿಂತಿರುಗಿದ್ದು, ಅವರಿಗೂ ಚಾಕು ತೋರಿಸಿದ ದರೋಡೆಕೋರರು ಕೂಗಾಡದಂತೆ ಬೆದರಿಕೆ ಒಡ್ಡಿದ್ದಾರೆ.
ಹಣ, ಚಿನ್ನಾಭರಣ, ದಾಖಲೆಗಳು
ದರೋಡೆಕೋರರು ಜಯಣ್ಣ ಗೌಡ ಅವರ ಪತ್ನಿ, ಸೊಸೆಯ ಕೊರಳಲ್ಲಿದ್ದ ಮಾಂಗಲ್ಯ ಸರಗಳನ್ನು ಕಿತ್ತುಕೊಂಡಿದ್ದಾರೆ. ಮನೆಯ ಬೀರೂವಿನಲ್ಲಿದ್ದ ಸುಮಾರು 25 ಲಕ್ಷ ರೂ. ಹಣ, ಚಿನ್ನಾಭರಣ, ದಾಖಲೆಗಳನ್ನು ಕದ್ದುಕೊಂಡು ಪರಾರಿಯಾಗಿದ್ದಾರೆ.
ದರೋಡೆಕೋರರು ಪರಾರಿಯಾಗುತ್ತಿದ್ದಂತೆ ಮನೆಯಲ್ಲಿದ್ದವರು ಕೂಗಾಡಿದ್ದಾರೆ. ನೆರೆಹೊರೆಯವರು ನೆರವಿಗೆ ಧಾವಿಸಿದ್ದಾರೆ. ಜಯಣ್ಣಗೌಡ ಅವರ ಪುತ್ರ ಗಿರೀಶ್ ಅವರನ್ನು ಕರೆಯಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಜಯಣ್ಣಗೌಡರಿಗೆ ಚಿಕಿತ್ಸೆ ನಡೆಯುತ್ತಿದೆ.
ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ದರೋಡೆಕೋರರ ಪತ್ತೆ ಕಾರ್ಯ ಆರಂಭವಾಗಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200