ಶಿವಮೊಗ್ಗ: ಇನ್‌ಸ್ಟಾಗ್ರಾಮ್ ಹಾಗೂ ಯೂಟ್ಯೂಬ್‌ನಲ್ಲಿ ಪ್ರಕಟವಾದ ಆನ್‌ಲೈನ್ ಹೂಡಿಕೆ ಜಾಹೀರಾತು ನಂಬಿ, ಲಾಭಾಂಶದ ಆಸೆಗೆ ಬಿದ್ದ ಶಿವಮೊಗ್ಗದ ಉದ್ಯಮಿಯೊಬ್ಬರು ₹1.20 ಕೋಟಿಗೂ ಅಧಿಕ ಹಣ ಕಳೆದುಕೊಂಡಿದ್ದಾರೆ.
2024ರ ಏಪ್ರಿಲ್ ತಿಂಗಳಲ್ಲಿ ಇನ್‌ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ವೀಕ್ಷಿಸುತ್ತಿದ್ದಾಗ ಕಂಪನಿ ಒಂದರ ಹೆಸರಿನ ಜಾಹೀರಾತು ಗಮನಿಸಿದ್ದರು. ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ದೊಡ್ಡ ಮೊತ್ತದ ಲಾಭಾಂಶ ನೀಡುವುದಾಗಿ ಜಾಹೀರಾತಿನಲ್ಲಿ ತಿಳಿಸಲಾಗಿತ್ತು. ಇದನ್ನು ನಂಬಿದ ಉದ್ಯಮಿ, ಜಾಹೀರಾತಿನಲ್ಲಿದ್ದ ಲಿಂಕ್ ಕ್ಲಿಕ್ ಮಾಡಿ, ತಮ್ಮ ಹೆಸರು, ಮೊಬೈಲ್ ಸಂಖ್ಯೆ ನೀಡಿ ಐಡಿ ಹಾಗೂ ಪಾಸ್‌ವರ್ಡ್ ಸೃಷ್ಟಿಸಿಕೊಂಡಿದ್ದರು.

ನಂತರ ವಂಚಕರು ನೀಡಿದ್ದ ಯುಪಿಐ ಐಡಿ, ಕ್ಯೂಆರ್ ಕೋಡ್ ಹಾಗೂ ಬ್ಯಾಂಕ್ ಖಾತೆಗಳ ಮೂಲಕ ಹಣ ವರ್ಗಾಯಿಸಲು ಆರಂಭಿಸಿದ್ದಾರೆ. ಹಣ ಹೂಡಿಕೆ ಮಾಡಿದ ತಕ್ಷಣ ಆಪ್‌ನಲ್ಲಿ ಇವರು ಹಾಕಿದ ಹಣ ಹಾಗೂ ಬಂದ ಲಾಭಾಂಶದ ಮೊತ್ತ ಕಾಣಿಸುತ್ತಿತ್ತು. ಅದನ್ನು ನಿಜವೆಂದು ನಂಬಿದ ಉದ್ಯಮಿ ಅವರು ತಮ್ಮ ಹಾಗೂ ಸ್ನೇಹಿತನ ಬ್ಯಾಂಕ್ ಖಾತೆಗಳಿಂದ ಏಪ್ರಿಲ್ 1, 2024 ರಿಂದ ಆಗಸ್ಟ್ 3, 2025 ರ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು ₹1,20,08,500 ಹಣ ವರ್ಗಾಯಿಸಿದ್ದಾರೆ. ಬಳಿಕ ಆಪ್‌ನಲ್ಲಿದ್ದ ಹಣ ಹಾಗೂ ಲಾಭಾಂಶವನ್ನು ತಮ್ಮ ಖಾತೆಗೆ ಡ್ರಾ ಮಾಡಿಕೊಳ್ಳಲು ಯತ್ನಿಸಿದಾಗ ಅವಕಾಶ ನೀಡಲಾಗಿಲ್ಲ. ನಂತರ ಉದ್ಯಮಿಯ ಐಡಿಯನ್ನೇ ಬ್ಲಾಕ್ ಮಾಡಲಾಗಿತ್ತು. ಘಟನೆ ಸಂಬಂಧ ತಡವಾಗಿ ದೂರು ನೀಡಿದ್ದಾರೆ. ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.