ವಿದ್ಯಾನಗರ ಫ್ಲೈ ಓವರ್‌ ಎದುರು ಬೈಕ್‌ಗೆ ಕಾರು ಡಿಕ್ಕಿ, ಸವಾರನ ಮೂಳೆ ಕಟ್‌, ಕಾರು ಎಸ್ಕೇಪ್‌

ಶಿವಮೊಗ್ಗ: ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೈಕ್‌ ಸವಾರನಿಗೆ ಗಂಭೀರ ಗಾಯವಾಗಿದೆ.

ರಾಗಿಗುಡ್ಡದ ಶಾಂತಿನಗರದ ಇಕ್ಬಾಲ್ ಅಹ್ಮದ್ (65) ಗಾಯಗೊಂಡಿದ್ದಾರೆ. ಬಿ.ಹೆಚ್‌.ರಸ್ತೆಯ ಹೊಳೆಹೊನ್ನೂರು ಫ್ಲೈ ಓವರ್‌ ಬಳಿ ಹೊಳೆ ಬಸ್‌ ನಿಲ್ದಾಣದ ಕಡೆಯಿಂದ ಇಕ್ಬಾಲ್‌ ಅಹಮದ್‌ ಅವರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ಸಂದರ್ಭ ಹಿಂದಿನಿಂದ ಬಂದ ಕಿಯಾ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ.  

Vidyanagara-Railway-Over-bridge-shimoga

ಘಟನೆಯಲ್ಲಿ ತೀವ್ರ ಪೆಟ್ಟುಬಿದ್ದಿದ್ದ ಇಕ್ಬಾಲ್ ಅಹ್ಮದ್ ಅವರನ್ನು ಸ್ಥಳೀಯರು ಅಶೋಕ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಲೆಗೆ ಗಾಯವಾಗಿ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆ. ದವಡೆ ಹಾಗೂ ಭುಜದ ಮೂಳೆ ಮುರಿದಿದೆ. ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇನ್ನು, ಅಪಘಾತ ಎಸಗಿದ ಕಾರಿನ ಚಾಲಕ ಆಸ್ಪತ್ರೆಗೆ ಬಂದು, ಮಾಹಿತಿ ನೀಡದೆ ಕಾರನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಶಿವಮೊಗ್ಗ ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.