ಶಿವಮೊಗ್ಗ: ಸೋಗಾನೆಯಲ್ಲಿ ನಿರ್ಮಾಣ ಹಂತದ ಹೈ ಸೆಕ್ಯುರಿಟಿ ಜೈಲು ಕಚೇರಿಯಲ್ಲಿದ್ದ ಸಿಸಿಟಿವಿ ಮೇಲ್ವಿಚಾರಣೆಯ ಹಾರ್ಡ್ ಡಿಸ್ಕ್ ಕಳ್ಳತನವಾಗಿದೆ. ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚಂದ್ರಕಾಂತ್ ನೀಡಿದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಈ ಸುದ್ದಿಯನ್ನು ಇನ್ನು 35 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಸೋಗಾನೆಯ ಜೈಲು ಕಾಮಗಾರಿಯಲ್ಲಿ ಕಳಪೆ ಗುಣಮಟ್ಟ ಹಾಗೂ ಲೋಪಗಳು ಕಂಡುಬಂದ ಹಿನ್ನೆಲೆ ಗುತ್ತಿಗೆದಾರರೊಂದಿಗಿನ ಒಪ್ಪಂದ ರದ್ದುಗೊಳಿಸುವ ಪ್ರಕ್ರಿಯೆಯನ್ನು ನಿಗಮ ಕೈಗೊಂಡಿತ್ತು. ನಿಗಮದ ಅಧಿಕಾರಿಗಳು ಸ್ಥಳದ ಜಂಟಿ ಪರಿಶೀಲನೆ ನಡೆಸಿದ್ದರು. ಕಚೇರಿಯ ಕಂಪ್ಯೂಟರ್ ಪರಿಶೀಲಿಸಿದಾಗ, ಸಿಸಿಟಿವಿ ದೃಶ್ಯಾವಳಿ ಇದ್ದ ₹25,000 ಮೌಲ್ಯದ 4 ಟಿಬಿ ಹಾರ್ಡ್ ಡಿಸ್ಕ್ ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ.

ಕಳಪೆ ಕಾಮಗಾರಿಯ ಸಾಕ್ಷ್ಯ ಮರೆಮಾಚುವ ಉದ್ದೇಶದಿಂದ ಹಾರ್ಡ್ ಡಿಸ್ಕ್ ಕಳವು ಮಾಡಿರಬಹುದು ಎಂದು ಶಂಕಿಸಲಾಗಿದೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.