ಶಿವಮೊಗ್ಗ: ಇನ್‌ಸ್ಟಾಗ್ರಾಂನಲ್ಲಿ ಪ್ರಕಟವಾಗಿದ್ದ ಸೋಪ್ ಜಾಹೀರಾತು ನೋಡಿ ಆರ್ಡರ್ ಮಾಡಿದ್ದ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ₹2.97 ಲಕ್ಷ ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಲಾಗಿದೆ.
ಶಿವಮೊಗ್ಗದ ಜಿಲ್ಲೆಯ ಎಲೆಕ್ಟ್ರಿಷಿಯನ್ ಒಬ್ಬರು ವಂಚನೆಗೆ ಒಳಗಾಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಸೋಪ್ ಜಾಹೀರಾತು ನೋಡಿ ಅದನ್ನು ಆರ್ಡರ್ ಮಾಡಿದ್ದರು. ಜುಲೈ 7ರಂದು ಆರ್ಡರ್ ಮನೆಗೆ ಬಾರದೇ ಇದ್ದಾಗ ಕೊರಿಯರ್ ನಂಬರ್‌ಗಾಗಿ ಗೂಗಲ್‌ನಲ್ಲಿ ಹುಡುಕಿದ್ದು, ನಂಬರ್ ಸಿಕ್ಕಿತ್ತು. ಆ ನಂಬರ್‌ಗೆ ಕರೆ ಮಾಡಿದಾಗ ಹಿಂದಿಯಲ್ಲಿ ಮಾತನಾಡಿದ ವ್ಯಕ್ತಿಯೊಬ್ಬರು ಮೊಬೈಲ್‌ಗೆ ಲಿಂಕ್ ಕಳುಹಿಸುವುದಾಗಿ ತಿಳಿಸಿ, ಅದರಲ್ಲಿ ಲಿಂಕ್ ಒತ್ತಿ ನಂಬರ್ ಹಾಕಲು ಸೂಚಿಸಿದ್ದ ಎಂದು ಆರೋಪಿಸಲಾಗಿದೆ.

ಕೊರಿಯರ್‌ನವರು ಹೇಳಿದಂತೆ ಮಾಡಿದ ನಂತರ ಎಲೆಕ್ಟ್ರಿಷಿಯನ್ ಅವರ ಮೊಬೈಲ್‌ಗೆ ಹಲವು ಮೆಸೇಜುಗಳು ಬಂದಿದ್ದು, ಏನೆಂದು ತಿಳಿಯದೆ ಆ ನಂಬರ್‌ಗಳನ್ನು ಡಿಲೀಟ್ ಮಾಡಿದ್ದರು. ಮಕ್ಕಳ ಶಾಲಾ ಫೀಸ್ ಕಟ್ಟಲು ಹೋದಾಗ ಖಾತೆಯಲ್ಲಿ ಹಣವಿಲ್ಲದಿರುವುದು ಗೊತ್ತಾಗಿದೆ. ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ಖಾತೆಯಿಂದ ಒಟ್ಟು ₹2,97,000 ಹಣ ಕಡಿತ ಆಗಿರುವುದು ಬೆಳಕಿಗೆ ಬಂದಿದೆ. ಆಗ ತಾವು ವಂಚನೆಗೊಳಗಾಗಿರುವುದು ಗೊತ್ತಾಗಿ, ಎಲೆಕ್ಟ್ರಿಷಿಯನ್ ದೂರು ನೀಡಿದ್ದಾರೆ. ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.