ಶಿವಮೊಗ್ಗ: ಲೋಕಾಯುಕ್ತ ಕಚೇರಿಯ ಹಿರಿಯ ಅಧಿಕಾರಿ ಎಂದು ಸುಳ್ಳು ಹೇಳಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರೊಬ್ಬರಿಗೆ ವಾಟ್ಸಪ್ ಕರೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟು ವಂಚಿಸಲು ಯತ್ನಿಸಿದ್ದ ಆಂಧ್ರಪ್ರದೇಶ ಮೂಲದ ಆರೋಪಿಯನ್ನು ಶಿವಮೊಗ್ಗದ ಸೈಬರ್ ಕ್ರೈಂ (CEN) ಪೊಲೀಸರು ಬಂಧಿಸಿದ್ದಾರೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಕದಿರಿ ನಿವಾಸಿ ಟಿ. ಧನಂಜಯ ರೆಡ್ಡಿ (33) ಬಂಧಿತ ಆರೋಪಿ. ಈತ ಲೋಕೋಪಯೋಗಿ ಇಲಾಖೆಯ (PWD) ವಿದ್ಯುತ್ ಉಪ ವಿಭಾಗದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರಾಗಿರುವ (AEE) ಚಿತ್ರದುರ್ಗದ ಪ್ರಶಾಂತ ನಗರದ ನಿವಾಸಿ ತಿಪ್ಪೇಸ್ವಾಮಿ (59) ಅವರಿಗೆ ಏಪ್ರಿಲ್ 22ರಂದು ವಾಟ್ಸಾಪ್ ಕರೆ ಮಾಡಿದ್ದ. ತಾನು ಬೆಂಗಳೂರಿನ ಲೋಕಾಯುಕ್ತ ಪ್ರಧಾನ ಕಚೇರಿಯ ಅಧಿಕಾರಿ ದಯಾನಂದ ಎಂದು ಪರಿಚಯಿಸಿಕೊಂಡಿದ್ದ.

‘ನಿಮ್ಮ ವಿರುದ್ಧ ಲೋಕಾಯುಕ್ತ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಕೇಸಿನಲ್ಲಿ ಕೋರ್ಟ್‌ಗೆ ಬಿ-ರಿಪೋರ್ಟ್ ಸಲ್ಲಿಸಬೇಕಾದರೆ ನಮಗೆ ಆನ್‌ಲೈನ್ ಮೂಲಕ ಹಣ ನೀಡಬೇಕು. ಅದಕ್ಕೆ ಸಿದ್ಧರಾಗಿರಿ ಎಂದು ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ಕುರಿತು ಅಧಿಕಾರಿ ತಿಪ್ಪೇಸ್ವಾಮಿ ಅವರು ನೀಡಿದ ದೂರಿನನ್ವಯ ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆಂಧ್ರದಲ್ಲಿ ನಡೆದ ಕಾರ್ಯಾಚರಣೆ
ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರಿಯಪ್ಪ ಎ.ಜಿ. ಅವರ ಮಾರ್ಗದರ್ಶನದಲ್ಲಿ, ಸೈಬರ್ ಕ್ರೈಂ ಪೊಲೀಸ್ ನಿರೀಕ್ಷಕ ಮಂಜುನಾಥ್ ನೇತೃತ್ವದಲ್ಲಿ ಎಎಸ್‌ಐ ಪ್ರಕಾಶ್ ಜೆ.ಕೆ., ಸಿಬ್ಬಂದಿ ಕಿರಣ್ ಕುಮಾರ್, ಸಂಗಮೇಶ ಹಾಗೂ ಶರತ್ ಕುಮಾರ್ ಒಳಗೊಂಡ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಆಂಧ್ರಪ್ರದೇಶ ಮೂಲದ ಆರೋಪಿ ಧನಂಜಯ ರೆಡ್ಡಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ಶಿವಮೊಗ್ಗದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
