ಶಿವಮೊಗ್ಗ: ತಾಯಿಯ ಉತ್ತರಕ್ರಿಯೆ ವೇಳೆ ಪೂಜೆಗೆಂದು ಇಟ್ಟಿದ್ದ ₹6.5 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಸರ ಕಳ್ಳತನವಾಗಿದೆ.
ನಗರದ ಅಚ್ಯುತರಾವ್ ಬಡಾವಣೆಯ 1ನೇ ತಿರುವಿನ ನಿರಂಜನ ಮೂರ್ತಿ ಅವರ ಮನೆಯಲ್ಲಿ ಘಟನೆ ನಡೆದಿದೆ. ನಿರಂಜನ ಮೂರ್ತಿ ಅವರ ತಾಯಿ ಪಾರ್ವತಮ್ಮ ಅವರು ಸೆಪ್ಟೆಂಬರ್ 12 ರಂದು ನಿಧನರಾಗಿದ್ದರು. ಈ ಹಿನ್ನೆಲೆ ಸೆಪ್ಟೆಂಬರ್ 15 ರಂದು ಮನೆಯಲ್ಲಿ ಮೂರನೇ ದಿನದ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪೂಜೆಗಾಗಿ ಕಳಸ ಪ್ರತಿಷ್ಠಾಪನೆ ಮಾಡಿ, ಅದಕ್ಕೆ ಪಾರ್ವತಮ್ಮ ಅವರ 52 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರ ಹಾಗೂ ಬೆಳ್ಳಿ ಕರಡಿಗೆಗಳನ್ನು ಇಟ್ಟು ಅಲಂಕರಿಸಲಾಗಿತ್ತು. ಪೂಜೆಗೆ ಕುಟುಂಬಸ್ಥರು ಆಗಮಿಸಿದ್ದರು. ಇದೇ ವೇಳೆ ಪಾರ್ವತಮ್ಮ ಅವರು ಇದ್ದಾಗ ಆರೈಕೆ ಮಾಡುತ್ತಿದ್ದ ಕೇರ್ ಟೇಕರ್ ಪೂಜೆಗೆ ಬಂದಿದ್ದರು. ಪೂಜೆ ಮುಗಿದ ನಂತರ ಕುಟುಂಬಸ್ಥರು ಹಾಗೂ ಬಂಧುಗಳು ಊಟಕ್ಕಾಗಿ ಮೇಲಂತಸ್ತಿಗೆ ತೆರಳಿದ್ದರು. ಈ ಸಂದರ್ಭ ಕೇರ್ ಟೇಕರ್ ಕೆಳಭಾಗದಲ್ಲಿಯೇ ಇದ್ದು, ಬಳಿಕ ಊಟ ಮಾಡಿ ತರಾತುರಿಯಲ್ಲಿ ಹೊರಟು ಹೋಗಿದ್ದಾರೆ.
ಕಾರ್ಯಕ್ರಮದ ಬಳಿಕ ಪೂಜೆಯ ಸಾಮಗ್ರಿಗಳನ್ನು ತೆರವುಗೊಳಿಸುವಾಗ ಕಳಸದಲ್ಲಿದ್ದ ಬಂಗಾರದ ಸರ ಕಾಣೆಯಾಗಿರುವುದು ಗೊತ್ತಾಗಿದೆ. ಕೇರ್ ಟೇಕರ್ ನಡವಳಿಕೆ ಬಗ್ಗೆ ಅನುಮಾನವಿರುವ ಹಿನ್ನೆಲೆ ಅವರ ವಿರುದ್ಧ ದೂರು ನೀಡಲಾಗಿದೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.