ಯುಟ್ಯೂಬ್‌ ವಿಡಿಯೋ ನೋಡಿದ ಮಹಿಳೆಗೆ ಆಮೇಲೆ ಕಾದಿತ್ತು ಶಾಕ್, ಆಗಿದ್ದೇನು?

ಶಿವಮೊಗ್ಗ: ಯೂಟ್ಯೂಬ್‌ನಲ್ಲಿ ಪ್ರಕಟವಾದ ಲಾಟರಿ ಜಾಹೀರಾತು ನಂಬಿ, ₹12 ಲಕ್ಷ ರೂಪಾಯಿ ಬಹುಮಾನದ ಆಸೆಗೆ ಮಹಿಳೆಯೊಬ್ಬರು ₹8.93 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದಾರೆ.

ಶಿವಮೊಗ್ಗದ ಮಹಿಳೆಯೊಬ್ಬರು ಮಾರ್ಚ್ 25 ರಂದು ಮನೆಯಲ್ಲಿ ಯೂಟ್ಯೂಬ್ ವೀಕ್ಷಿಸುತ್ತಿದ್ದಾಗ ಕೇರಳ ಲಾಟರಿ ಎಂಬ ಜಾಹೀರಾತು ಬಂದಿತ್ತು. ಜಾಹೀರಾತಿನ ಲಿಂಕ್ ಕ್ಲಿಕ್ ಮಾಡಿ ತಮ್ಮ ಹೆಸರು ಹಾಗೂ ಮೊಬೈಲ್ ಸಂಖ್ಯೆ ನಮೂದಿಸಿದ್ದ ಮಹಿಳೆಗೆ, ₹12 ಲಕ್ಷದ ಲಾಟರಿ ಬಹುಮಾನ ಬಂದಿದೆ ಎಂದು ವಾಟ್ಸಾಪ್ ಮೆಸೇಜ್‌ ಬಂದಿತ್ತು. ನಂಬಿದ ಮಹಿಳೆ ವಂಚಕರು ನೀಡಿದ್ದ ಹೆಲ್ಪ್‌ಲೈನ್ ಸಂಖ್ಯೆಗೆ ಕರೆ ಮಾಡಿದ್ದಾರೆ.

SMS-Fraud-Shimoga-CEN-Police-Station.

ಬಹುಮಾನದ ಹಣ ಬಿಡುಗಡೆ ಮಾಡಲು ಪ್ರೊಸೆಸಿಂಗ್ ಶುಲ್ಕ, ಜಿಎಸ್‌ಟಿ, ತೆರಿಗೆ ಹಾಗೂ ವಿವಿಧ ಸೇವಾ ಶುಲ್ಕಗಳನ್ನು ಪಾವತಿಸಬೇಕು ಎಂದು ಹಂತ ಹಂತವಾಗಿ ವಂಚಕರು ಮಹಿಳೆಗೆ ತಿಳಿಸಿದ್ದರು. ವಂಚಕರ ಮಾತು ನಂಬಿದ ಮಹಿಳೆ ಮಾರ್ಚ್ 31 ರಿಂದ ಆಗಸ್ಟ್ 27 ರ ಅವಧಿಯಲ್ಲಿ ವಿವಿಧ ಬ್ಯಾಂಕ್ ಖಾತೆ ಹಾಗೂ ಯುಪಿಐ ಐಡಿಗಳಿಗೆ ಒಟ್ಟು ₹8,93,297 ವರ್ಗಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಬಹುಮಾನದ ಮೊತ್ತ ಕೈಸೇರದೆ ಇದ್ದಾಗ ತಾನು ಮೋಸ ಹೋಗಿರುವುದು ಮಹಿಳೆಗೆ ಅರಿವಾಗಿದೆ. ಈ ಸಂಬಂಧ ರಾಷ್ಟ್ರೀಯ ಸೈಬರ್ ಹೆಲ್ಪ್‌ಲೈನ್ 1930 ರಲ್ಲಿ ದೂರು ನೀಡಿದ ಬಳಿಕ, ಶಿವಮೊಗ್ಗ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.