ಶಿವಮೊಗ್ಗ: ನಗರದ ಎಪಿಎಂಸಿ ಯಾರ್ಡ್ ಬಳಿ ಜಾಗದ ವಿಚಾರವಾಗಿ ಮೆಕಾನಿಕ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧ ಇಬ್ಬರಿಗೆ ಜೀವಾವಧಿ ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. (ಈ ಸುದ್ದಿಯನ್ನು ಇನ್ನು 61 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಗಣೇಶ್ (34) ಹಾಗೂ ಗಿರೀಶ್ (23) ಶಿಕ್ಷೆಗೆ ಒಳಗಾದ ಅಪರಾಧಿಗಳು. ನಗರದ ಎಪಿಎಂಸಿ ಯಾರ್ಡ್ ಎದುರು ಬಿಎಸ್ಎನ್ಎಲ್ ಕಚೇರಿ ಬಳಿ ಸ್ಟೀಫನ್ ಶ್ರೀನಿವಾಸ್ (68) ಗ್ಯಾರೇಜ್ ನಡೆಸುತ್ತಿದ್ದರು. ಗ್ಯಾರೇಜ್ ಪಕ್ಕದಲ್ಲಿದ್ದ ಮಹಾನಗರ ಪಾಲಿಕೆಗೆ ಸೇರಿದ ಜಾಗದಲ್ಲಿದ್ದ ವಾಹನಗಳನ್ನು ತೆರವುಗೊಳಿಸುವಂತೆ ಆರೋಪಿ ಗಣೇಶ್ ಒತ್ತಾಯಿಸಿದ್ದ. ಶ್ರೀನಿವಾಸ್ ಅದಕ್ಕೆ ಒಪ್ಪಿರಲಿಲ್ಲ.

ಈ ದ್ವೇಷದಿಂದಾಗಿ 2020ರ ನವೆಂಬರ್ 23 ರಂದು ಗಣೇಶ್ ಹಾಗೂ ಗಿರೀಶ್ ಸೇರಿ ಶ್ರೀನಿವಾಸ್ ಅವರ ಮೇಲೆ ಲಾಂಗಿನಿಂದ ದಾಳಿ ನಡೆಸಿದ್ದರು. ಅಲ್ಲದೆ ಕಾರಿನ ಟೈರನ್ನು ತಲೆಯ ಮೇಲೆ ಎತ್ತಿಹಾಕಿ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಗಂಭೀರ ಗಾಯಗೊಂಡಿದ್ದ ಶ್ರೀನಿವಾಸ್ ಅವರು 2021ರ ಜನವರಿ 12 ರಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಘಟನೆ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಆಗಿನ ಇನ್ಸ್ಪೆಕ್ಟರ್ ದೀಪಕ್ ಎಂ.ಎಸ್. ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಅಭಯ್ ಧನಪಾಲ್ ಚೌಗಲೆ ಅವರು ಆರೋಪ ಸಾಬೀತಾದ ಹಿನ್ನೆಲೆ, ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕಿ ಮಮತಾ ಬಿ.ಎಸ್. ವಾದ ಮಂಡಿಸಿದ್ದರು.