ಶಿವಮೊಗ್ಗ ಲೈವ್
ಶಿವಮೊಗ್ಗ: ಕಾರ್ ಗ್ಯಾರೇಜ್ಗೆ ನುಗ್ಗಿದ ಮುಸುಕುಧಾರಿಗಳು ಕ್ಯಾಶ್ ಬಾಕ್ಸ್ ಮುರಿದು ಲಕ್ಷಾಂತರ ರೂಪಾಯಿ ನಗದು ಹಾಗೂ ಬ್ಯಾಟರಿ ಕಳ್ಳತನ ಮಾಡಿದ್ದಾರೆ. ಆಟೋ ಕಾಂಪ್ಲೆಕ್ಸ್ 2ನೇ ಅಡ್ಡರಸ್ತೆಯ ಇಂಡಿಯನ್ ಕಾರ್ ಗ್ಯಾರೇಜ್ನಲ್ಲಿ ಘಟನೆ ನಡೆದಿದೆ.
ಕಾರುಗಳ ರಿಪೇರಿಗಾಗಿ ಮಾಲೀಕರು ನೀಡಿದ್ದ ₹3,01,200 ಹಣವನ್ನು ಗ್ಯಾರೇಜ್ನ ಕ್ಯಾಶ್ ಬಾಕ್ಸ್ನಲ್ಲಿ ಇಡಲಾಗಿತ್ತು. ರಾತ್ರಿ ವೇಳೆ ಗ್ಯಾರೇಜ್ಗೆ ನುಗ್ಗಿದ ಇಬ್ಬರು ಮುಸುಕುಧಾರಿಗಳು ಬೀಗ ಮುರಿದು ಹಣ ಹಾಗೂ ಕಾರಿನ ಬ್ಯಾಟರಿಯನ್ನು ಕದ್ದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ.

ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಕಳ್ಳತನದ ದೃಶ್ಯ ಪಕ್ಕದ ಗ್ಯಾರೇಜ್ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೈಕ್ನಲ್ಲಿ ಬಂದ ವ್ಯಕ್ತಿಯೊಬ್ಬ ಮುಸುಕುಧಾರಿಗಳನ್ನು ಬಿಟ್ಟು ಹೋಗಿದ್ದಾನೆ. ಅಲ್ಲದೆ ಹೊರಗೆ ನಿಂತು ಸಿಗ್ನಲ್ ನೀಡುತ್ತಿರುವ ದೃಶ್ಯವು ಸೆರೆಯಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಗ್ಯಾರೇಜ್ ಬಗ್ಗೆ ಪರಿಚಿತರೆ ಕೃತ್ಯ ಎಸಗಿರಬಹುದು ಎಂಬ ಶಂಕೆ ಇದೆ ಎಂದು ತಿಳಿಸಲಾಗಿದೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.