ಶಿವಮೊಗ್ಗದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಶಿವಮೊಗ್ಗ: ವೆಂಕಟೇಶ ನಗರದ ಮನೆ ಎದುರು ನಿಲ್ಲಿಸಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಭಾನುವಾರ ತಡರಾತ್ರಿ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.

ಬೆಂಕಿಯ ಪರಿಣಾಮ ದ್ವಿಚಕ್ರ ವಾಹನಗಳ ಸೀಟ್, ಪೆಟ್ರೋಲ್ ಟ್ಯಾಂಕ್ ಹಾಗೂ ಮೀಟರ್ ಬೋರ್ಡ್ ಸೇರಿ ಇತರ ಭಾಗಗಳು ಸುಟ್ಟಿವೆ. ಬೈಕುಗಳು ಆಂಥೋನಿ ಎಂಬುವವರಿಗೆ ಸೇರಿವೆ.

Youth-Pour-Petrol-on-Bikes-at-Venkatesha-Nagara

ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಇನ್ನು, ಬೈಕುಗಳಿಗೆ ಬೆಂಕಿ ಹಚ್ಚಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಾಟಲಿಯಲ್ಲಿ ತಂದಿದ್ದ ಪೆಟ್ರೋಲ್‌ ಅನ್ನು ಬೈಕುಗಳ ಮೇಲೆ ಸುರಿದ ಯುವಕ, ನಂತರ ಬೆಂಕಿ ಹಚ್ಚಿದ್ದಾನೆ. ಬೆಂಕಿಯ ಕೆನ್ನಾಲಗೆ ಜೋರಾಗುತ್ತಿದ್ದಂತೆ ಆತ ಅಲ್ಲಿಂದ ಓಡಿ ಹೋಗಿದ್ದಾನೆ. ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ ಆರೋಪದಲ್ಲಿ ಮಣಿಕಂಠ ಎಂಬಾತನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.