ಶಿವಮೊಗ್ಗ ಲೈವ್
ಶಿವಮೊಗ್ಗ: ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕುಟುಂಬದವರಿಗೆ ಫೋನ್ ಮಾಡಿ ತೆರಳಿದ್ದ 20 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನನ್ನು ವಿನೋಬನಗರ ಠಾಣೆಯ ಪೊಲೀಸರು ಪತ್ತೆ ಹಚ್ಚಿ ರಕ್ಷಣೆ ಮಾಡಿದ್ದಾರೆ.
ಶಿವಮೊಗ್ಗ ನಗರದ ವಿದ್ಯಾರ್ಥಿಯೊಬ್ಬ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕುಟುಂಬದವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದ. ಆತಂಕಗೊಂಡ ಕುಟುಂಬಸ್ಥರು ತಕ್ಷಣವೇ ವಿನೋಬನಗರ ಠಾಣೆ ಇನ್ಸ್‌ಪೆಕ್ಟರ್ ಸಂತೋಷ್ ಅವರಿಗೆ ಮಾಹಿತಿ ನೀಡಿದರು.

ವಿನೋಬನಗರ ಠಾಣೆಯ ಹೆಚ್‌ಸಿ ಯೋಗೇಶ್ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ಹೆಚ್‌ಸಿ ಗುರುರಾಜ್, ವಿದ್ಯಾರ್ಥಿಯು ಸೋಮಿನಕೊಪ್ಪ ಕೆರೆ ಹತ್ತಿರ ಇರುವುದನ್ನು ಪತ್ತೆ ಹಚ್ಚಿದ್ದರು. ನಂತರ ಸೋಮಿನಕೊಪ್ಪ ಗ್ರಾಮಸ್ಥರ ನೆರವಿನಿಂದ ವಿದ್ಯಾರ್ಥಿಯನ್ನು ರಕ್ಷಿಸಿ, ಆತನ ಕುಟುಂಬದ ವಶಕ್ಕೆ ಒಪ್ಪಿಸಲಾಯಿತು. ಸಮಯಪ್ರಜ್ಞೆ ಮೆರೆದು ಯುವಕನ ಪ್ರಾಣ ಉಳಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯಕ್ಕೆ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್.ಬಿ ಅಭಿನಂದಿಸಿದ್ದಾರೆ.