ಶಿವಮೊಗ್ಗ ಲೈವ್.ಕಾಂ | RIPPONPETE / SHIMOGA NEWS | 27 ಆಗಸ್ಟ್ 2021
ನೇರಲಿಗೆ ಅರಣ್ಯ ಪ್ರದೇಶದಲ್ಲಿ ಯುವತಿ ಹತ್ಯೆ ಮಾಡಿ, ವಿಷ ಸೇವಿಸಿದ್ದ ಯುವಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾನೆ.
ಕೊಲೆಗೈದು ಆತ್ಮಹತ್ಯೆಗೆ ಯತ್ನ
ಶಿವಮೊಗ್ಗದ ಖಾಸಗಿ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿನಿ ಕವಿತಾ (22) ಎಂಬಾಕೆಯನ್ನು ಆಕೆಯ ಸ್ನೇಹಿತ ರಿಪ್ಪನ್ ಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಂತಿಮ ವರ್ಷದ ಪದವಿ ವಿದ್ಯಾರ್ಥಿ ಶಿವಮೂರ್ತಿ ಕೊಲೆ ಮಾಡಿದ್ದಾನೆ. ಬಳಿಕ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದ. ಸ್ನೇಹಿತರ ಮೂಲಕ ವಿಚಾರ ತಿಳಿದು ಕುಟುಂಬದವರು ಶಿವಮೂರ್ತಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದರು.
ಪೊಲೀಸ್ ವಿಚಾರವಣೆ ವೇಳೆ ಬಾಯ್ಬಿಟ್ಟ
ಆತ್ಮಹತ್ಯೆ ಯತ್ನ ಸಂಬಂಧ ಪೊಲೀಸರು ಶಿವಮೂರ್ತಿಯಿಂದ ಹೇಳಿಕೆ ಪಡೆಯುವಾಗ ಕವಿತಾಳ ಹತ್ಯೆ ಮಾಡಿರುವ ವಿಚಾರ ಬಾಯಿಬಿಟ್ಟಿದ್ದ. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ನೇರಲಿಗೆ ಅರಣ್ಯ ಪ್ರದೇಶದಲ್ಲಿ ಕವಿತಾಳ ಮೃತದೇಹ ಪತ್ತೆಯಾಗಿತ್ತು. ಕವಿತಾಳ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು.
ಡೆತ್ ನೊಟ್ ಬರೆದಿಟ್ಟಿದ್ದ ಶಿವಮೂರ್ತಿ
ಆತ್ಮಹತ್ಯೆ ಪ್ರಯತ್ನಕ್ಕೂ ಮೊದಲು ಶಿವಮೂರ್ತಿ ಡೆತ್ ನೊಟ್ ಬರೆದಿದ್ದ. ಕವಿತಾಳ ಮೃತದೇಹ ಪತ್ತೆಯಾದ ಸ್ಥಳದಲ್ಲೇ ಡೆತ್ ನೋಟ್ ಪತ್ತೆಯಾಗಿತ್ತು. ಇದರ ಕೊನೆಯಲ್ಲಿ ಶಿವಮೂರ್ತಿ ಮತ್ತು ಕವಿತಾಳ ಹೆಸರು ಬರೆಯಲಾಗಿದೆ. ಈ ಪತ್ರದಲ್ಲಿ ಪ್ರೀತಿಯಲ್ಲಿ ವಂಚನೆಯಾಗಿರುವ ಕುರಿತು ಬರೆಯಲಾಗಿತ್ತು. ‘ತಾನು ಪಿಯುಸಿ ಓದುತ್ತಿದ್ದ ಕಾಲೇಜಿನಲ್ಲಿ ಭಟ್ಕಳ ಮೂಲದ ಕವಿತಾಳನ್ನು ಪ್ರೀತಿಸಿದೆ. ಏಳು ವರ್ಷ ಆಕೆ ನನ್ನನ್ನು ಪ್ರೀತಿಸಿದಳು. ಇತ್ತೀಚೆಗೆ ಭದ್ರಾವತಿ ಮೂಲದ ಆಂಬುಲೆನ್ಸ್ ಚಾಲಕನನ್ನು ಆಕೆ ಪ್ರೀತಿಸುತ್ತಿದ್ದಾಳೆ. ಆದ ಕಾರಣ ಆಕೆಯನ್ನು ಇಲ್ಲಿಗೆ ಕರೆತಂದು ಅನಿಸಿಕೆ ಕೇಳುತ್ತಿದ್ದೇನೆ’ ಎಂದು ಡೆತ್ ನೋಟ್’ನಲ್ಲಿ ಬರೆಯಲಾಗಿತ್ತು. ಅಲ್ಲದೆ ‘ಎಂದಿಗೂ ಪ್ರೀತಿಯನ್ನು ನಂಬಬೇಡಿ ಸ್ನೇಹಿತರೆ’ ಎಂದು ಬರೆಯಲಾಗಿದೆ.
ವೇಲ್’ನಿಂದ ಕುತ್ತಿಗೆ ಬಿಗಿದು ಹತ್ಯೆ
ಬುಧವಾರ ಮಧ್ಯಾಹ್ನ 12 ಗಂಟೆಗೆ ಕವಿತಾಳನ್ನು ನೇರಲಿಗೆ ಅರಣ್ಯ ಪ್ರದೇಶಕ್ಕೆ ಕರೆತಂದ ಶಿವಮೂರ್ತಿ, ಆಕೆಯೊಂದಿಗೆ ಮಾತನಾಡಿದ್ದಾನೆ. ಬಳಿಕ ವೇಲ್’ನಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾನೆ. ಆಕೆ ಕೊನೆಯುಸಿರೆಳೆದ ನಂತರ ಶಿವಮೂರ್ತಿ ಕ್ರಿಮಿನಾಶಕ ಸೇವಿಸಿರುವ ಸಾಧ್ಯತೆ ಇದೆ. ಅದರ ಬಾಟಲಿ ಕೂಡ ಕವಿತಾಳ ಮೃತದೇಹದ ಪಕ್ಕದಲ್ಲಿ ಪತ್ತೆಯಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಸಾವು
ಶಿವಮೂರ್ತಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆರಂಭದಲ್ಲಿ ಚಿಕಿತ್ಸೆಗೆ ಸ್ಪಂದಿಸಿದ್ದ ಶಿವಮೂರ್ತಿ, ಆ ಬಳಿಕ ನಿಧಾನಕ್ಕೆ ಆತನ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಮೆಗ್ಗಾನ್ ಆಸ್ಪತ್ರೆಯಲ್ಲೇ ಶಿವಮೂರ್ತಿ ಕೊನೆಯುಸಿರೆಳೆದಿದ್ದಾನೆ. ಈ ಮಧ್ಯೆ ಕವಿತಾಳ ಪೋಷಕರು ಶಿವಮೂರ್ತಿ ವಿರುದ್ಧ ರಿಪ್ಪನ್’ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ತಮ್ಮ ಮಗಳ ಸ್ನೇಹಿತ ಶಿವಮೂರ್ತಿ ಆಕೆಯ ಹತ್ಯೆಗೈದಿದ್ದಾನೆ ಎಂದು ದೂರಿದ್ದರು.
ಇಬ್ಬರ ಪರಿಚಯವಾಗಿದ್ದು ಹೇಗೆ?
ಶಿವಮೂರ್ತಿಯು ಹೊಸನಗರ ತಾಲೂಕಿನ ತಳಲೆಯ ಕಗಲಿಜೆಡ್ಡು ಗ್ರಾಮದವನು. ಕವಿತಾ ಸಾಗರ ತಾಲೂಕು ಭಾನುಕುಳಿ ಗ್ರಾಮದ ಹೆಬ್ಬನಕೆರೆಯವಳು. ಊರಲ್ಲಿ ಓದಿಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ರಿಪ್ಪನ್ ಪೇಟೆಯಲ್ಲಿರುವ ಸಂಬಂಧಿಕರ ಮನೆಲ್ಲಿದ್ದು ಓದುತ್ತಿದ್ದಳು. ಬಳಿಕ ಬಿಸಿಎಂ ಹಾಸ್ಟೆಲ್ ಸೇರಿ ಓದು ಮುಂದುವರೆಸಿದ್ದಳು. ರಿಪ್ಪನ್ ಪೇಟೆಯ ಪದವಿ ಪೂರ್ವ ಕಾಲೇಜಿನಲ್ಲಿ ಓದುವಾಗ ಕವಿತಾಗೆ ಶಿವಮೂರ್ತಿಯ ಪರಿಚಯವಾಗಿತ್ತು. ಪರಿಚಯ ಪ್ರೀತಿಯಾಗಿತ್ತು ಎಂದು ಹೇಳಲಾಗುತ್ತಿದೆ. ನಂತರ ಕವಿತಾ ಶಿವಮೊಗ್ಗದ ಖಾಸಗಿ ನರ್ಸಿಂಗ್ ಕಾಲೇನಲ್ಲಿ ವಿದ್ಯಭ್ಯಾಸ ಆರಂಭಿಸಿದ್ದಳು.
ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆ ಹೆಚ್ಚುವರಿ ರಕ್ಷಣಾಧಿಕಾರಿ ಡಾ. ಹೆಚ್.ಟಿ.ಶೇಖರ್, ತೀರ್ಥಹಳ್ಳಿ ಡಿವೈಎಸ್’ಪಿ ಶಾಂತವೀರ, ಸಿಪಿಐ ಮಧುಸೂದನ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200