ಶಿವಮೊಗ್ಗದಲ್ಲಿ ತಾಯಿ, ಮಕ್ಕಳು ತುಂಗಾ ನದಿಗೆ ಜಿಗಿದ ಕೇಸ್‌ಗೆ ಟ್ವಿಸ್ಟ್‌, ಏನದು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ತಾಯಿ ಮತ್ತು ಮೂವರು ಮಕ್ಕಳು ರೈಲ್ವೆ ಸೇತುವೆಯಿಂದ ತುಂಗಾ ನದಿಗೆ ಜಿಗಿದ ಪ್ರಕರಣ ಟ್ವಿಸ್ಟ್‌ ಪಡೆದುಕೊಂಡಿದೆ. ತಾಯಿಯ ಹೇಳಿಕೆ ಆಧಾರದಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಮಕ್ಕಳು ಕಾಲು ಜಾರಿ ಸೇತುವೆಯಿಂದ ನದಿಗೆ ಬಿದ್ದಿದ್ದಾರೆ ಎಂದು ಉಲ್ಲೇಖಿಸಲಾಗಿದೆ.  

ಆಗಸ್ಟ್‌ 24ರ ಸಂಜೆ ರೈಲ್ವೆ ಮೇಲ್ಸೇತುವೆಯಿಂದ ತುಂಗಾ ನದಿಗೆ ಜಿಗಿದ ಭವಾನಿ ಮತ್ತು 11 ತಿಂಗಳ ಮಗುವನ್ನು ಸ್ಥಳೀಯರು ರಕ್ಷಿಸಿದ್ದರು. ಸಾನ್ವಿಕಾ (5) ಮತ್ತು ತಾನ್ವಿಕಾ (3) ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಭವಾನಿಯೇ ತನ್ನ ಮಕ್ಕಳನ್ನು ನೀರಿಗೆ ತಳ್ಳಿ, 11 ತಿಂಗಳ ಗಂಡು ಮಗುವಿನೊಂದಿಗೆ ನದಿಗೆ ಜಿಗಿದ್ದಿದ್ದರು ಎಂದು ಆರೋಪಿಸಲಾಗಿತ್ತು. ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

ತಳ್ಳಿದ್ದಲ್ಲ ಕಾಲು ಜಾರಿದ್ದು

ಘಟನೆ ಸಂಬಂಧ ಭವಾನಿ ನೀಡಿದ ಹೇಳಿಕೆ ಆಧಾರದಲ್ಲಿ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾನ್ವಿಕಾ ಮತ್ತು ತಾನ್ವಿಕಾ ರೈಲ್ವೆ ಸೇತುವೆ ಮೇಲಿನಿಂದ ಕಾಲು ಜಾರಿ ನದಿಗೆ ಬಿದ್ದಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

Rescue-Operation-for-Two-Children-in-Tunga-River

ಆ.24ರಂದು ಮಧ್ಯಾಹ್ನ ಮೂವರು ಮಕ್ಕಳೊಂದಿಗೆ ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಬಂದಿದ್ದಾಗಿ ಭವಾನಿ ದೂರಿನಲ್ಲಿ ತಿಳಿಸಿದ್ದಾರೆ. ಮಕ್ಕಳನ್ನು ಲಯನ್‌ ಸಫಾರಿಗೆ ಕರೆದೊಯ್ಯಲು ಯೋಜಿಸಿದ್ದರು. ಆದರೆ ಊಟ ಮಾಡಿಸುವಷ್ಟರಲ್ಲಿ ಸಮಯ ಮೀರಿದ್ದರಿಂದ ಪುನಃ ಊರಿಗೆ ತೆರಳಲು ಹೊಳೆ ಬಸ್‌ ನಿಲ್ದಾಣದ ಬಳಿ ಬಸ್ಸಿಗಾಗಿ ಕಾಯುತ್ತಿದ್ದರು.

ತುಂಗಾ ನದಿಯಲ್ಲಿ ನೀರನ್ನು ನೋಡುವ ಸಲುವಾಗಿ ಅರಕೇಶ್ವರ ದೇವಸ್ಥಾನದ ಕಡೆಯಿಂದ ರೈಲ್ವೆ ಸೇತುವೆ ಮೇಲೆ ನಡೆದು ಹೋಗಿದ್ದರು. ಸೇತುವೆ ಮೇಲಿಂದ ಸಾನ್ವಿಕಾ ಮತ್ತು ತಾನ್ವಿಕಾ ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು 11 ತಿಂಗಳ ಮಗವಿನೊಂದಿಗೆ ತಾನು ನದಿಗೆ ಜಿಗಿದೆ ಎಂದು ಭವಾನಿ ದೂರಿನಲ್ಲಿ ತಿಳಿಸಿದ್ದಾರೆ. ನೀರಿನ ಸೆಳೆತ ಹೆಚ್ಚಿದ್ದರಿಂದ ಇಬ್ಬರು ಮಕ್ಕಳು ಕೊಚ್ಚಿ ಹೋಗಿದ್ದಾರೆ. ಸಾರ್ವಜನಿಕರು ತನ್ನನ್ನು ಮತ್ತು 11 ತಿಂಗಳ ಮಗು ನಿಶ್ಚಿತೇಜ್‌ನನ್ನು ರಕ್ಷಿಸಿದ್ದಾರೆ ಎಂದು ಭವಾನಿ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಹೇಳಿಕೆ ನೀಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಜೀವದ ಹಂಗು ತೊರೆದು ರಕ್ಷಣೆ

ತಾಯಿ ಮತ್ತು ಮಕ್ಕಳು ನದಿಗೆ ಬೀಳುವುದನ್ನು ಗಮನಿಸಿದ್ದ ಸ್ಥಳೀಯರು ಜೀವದ ಹಂಗು ತೊರೆದು ನದಿಗೆ ಜಿಗಿದಿದ್ದರು. ಶಿವಮೊಗ್ಗದ ದಾದಾಪೀರ್‌ ಮತ್ತು ನವೀನ್‌ ಎಂಬುವವರು ಕತ್ತಲಲ್ಲಿ, ತುಂಬಿ ಹರಿಯುತ್ತಿದ್ದ ತುಂಗಾ ನದಿಗೆ ಹಾರಿ, ಭವಾನಿ ಮತ್ತು 11 ತಿಂಗಳ ನಿಶ್ಚಿತೇಜ್‌ನನ್ನು ಕಾಪಾಡಿದ್ದರು. ಯುವಕರ ಸಾಹಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಸಿಗದ ಮಕ್ಕಳ ಸುಳಿವು

ಸೇತುವೆ ಮೇಲಿಂದ ಬಿದ್ದಿದ್ದ ಸಾನ್ವಿಕಾ ಮತ್ತು ತನ್ವಿಕಾ ಅವರ ಸುಳಿವು ಇನ್ನೂ ಸಿಕ್ಕಿಲ್ಲ. ಘಟನೆ ನಡೆದ ದಿನದಿಂದ ಸತತ ಮೂರು ದಿನ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ರಬ್ಬರ್‌ ಬೋಟ್‌ ಬಳಸಿ ತುಂಗಾ ನದಿಯ ನೀರಿನ ಅಡಿ, ನದಿ ದಂಡೆ ಮೇಲೆ ಹುಡುಕಾಟ ಮಾಡಿದರು. ಆದರೆ ಈತನ ಮಕ್ಕಳ ಸುಳಿವು ಪತ್ತೆಯಾಗಿಲ್ಲ.

ಇತ್ತ ಭವಾನಿ ನೀಡಿರುವ ಹೇಳಿಕೆ ಆಧಾರದಲ್ಲಿ ಪ್ರಕರಣ ದಾಖಲಾಗಿದ್ದರು, ಪೊಲೀಸರು ವಿವಿಧ ಕೋನದಿಂದ ತನಿಖೆ ಮುಂದುವರೆಸಿದ್ದು, ಹಲವರ ವಿಚಾರಣೆ ನಡೆಸುತ್ತಿದ್ದಾರೆ.