ಮಾಲೀಕರೆ ಹುಷಾರ್, ಶಿವಮೊಗ್ಗದಲ್ಲಿ ಗೇಟ್ ಹೊರಗೆ ನಿಲ್ಲೋ ಬೈಕ್​ಗಳೆ ಕಳ್ಳರ ಟಾರ್ಗೆಟ್, ಖದೀಮರಿಗೇಕೆ ಭಯವಿಲ್ಲ?

ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಜುಲೈ 2021

ಶಿವಮೊಗ್ಗ ನಗರದಲ್ಲಿ ಪೆಟ್ರೋಲ್ ಕಳ್ಳರ ಹಾವಳಿ ಹೆಚ್ಚುತ್ತಿದೆ. ರಾತ್ರಿ ವೇಳೆ ಬೈಕ್‍ಗಳಲ್ಲಿ ಪೆಟ್ರೋಲ್ ಪೈಪ್‍ಗಳನ್ನು ಕಟ್ ಮಾಡಿ, ಕಳುವು ಮಾಡುತ್ತಿದ್ದಾರೆ. ಖದೀಮರ ಹಾವಳಿಯಿಂದ ಬೈಕ್ ಸವಾರರು ಹೈರಾಣಾಗಿದ್ದಾರೆ.

ಹೊರ ನಿಲ್ಲುವ ವಾಹನಗಳೆ ಟಾರ್ಗೆಟ್

ಮನೆಯ ಗೇಟ್‍ನಿಂದ ಹೊರಗೆ ನಿಲ್ಲಿಸಿರುವ ವಾಹನಗಳೆ ಕಳ್ಳರ ಪ್ರಮುಖ ಟಾರ್ಗೆಟ್‍. ರಾತ್ರಿ ವೇಳೆ ಕಳ್ಳರ ಗ್ಯಾಂಗ್, ಬೈಕ್‍ಗಳ ಪೆಟ್ರೋಲ್ ಟ್ಯಾಂಕ್‍ನಿಂದ ಎಂಜಿನ್‍ಗೆ ಹೋಗುವ ಪೆಟ್ರೋಲ್ ಪೂರೈಕೆ ಮಾಡುವ, ಪೈಪ್ ಕಟ್ ಮಾಡುತ್ತಿದ್ದಾರೆ. ಅದರ ಮೂಲಕ ಪೆಟ್ರೋಲ್ ಕಳುವು ಮಾಡಿ ಎಸ್ಕೇಪ್ ಆಗತ್ತಿದ್ದಾರೆ.

ಬೆಳಗಿನ ಜಾವ ನಡೆಯುತ್ತಂತೆ ಕೃತ್ಯ

ಕಳ್ಳರು ಪೆಟ್ರೋಲ್ ಕಳುವು ಮಾಡಲು ಬೆಳಗಿನ ಜವಾದ ಸಮಯ ಆಯ್ಕೆ ಮಾಡಿಕೊಳ್ಳುತ್ತಾರೆ ಅಂತಾರೆ ಪೊಲೀಸರು. ಜನರು ಗಾಢ ನಿದ್ರೆಯಲ್ಲಿದ್ದಾಗ ಕಳ್ಳರು ಕಳವು ಮಾಡುತ್ತಿದ್ದಾರೆ. ಸದ್ದಿಲ್ಲದೆ ಪೆಟ್ರೋಲ್ ಇಳಿಸಿಕೊಂಡು ಪರಾರಿಯಾಗುತ್ತಿದ್ದಾರೆ.

ಒಂದೇ ಬೀದಿಯಲ್ಲಿ ಕಳುವು

ಪೆಟ್ರೋಲ್ ರೇಟ್ ಹೆಚ್ಚಾಗುತ್ತಿದೆ. ಇದೆ ಕಾರಣಕ್ಕೆ ಪೆಟ್ರೋಲ್ ಕಳುವು ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ. ಪುರುಲೆಯ ಒಕ್ಕಲಿಗ ಬೀದಿಲ್ಲಿ ಒಂದೆ ರಾತ್ರಿ 30ಕ್ಕೂ ಹೆಚ್ಚು ಬೈಕ್‍ಗಳಲ್ಲಿ ಪೆಟ್ರೋಲ್ ಕಳುವು ಮಾಡಲಾಗಿದೆ. ‘ಪೊಲೀಸರು ಮುಖ್ಯ ರಸ್ತೆ ಮಾತ್ರವಲ್ಲ, ಒಳ ರಸ್ತೆಗಳಲ್ಲೂ ಗಸ್ತು ತಿರುಗಿದರೆ ಇಂತಹ ಘಟನೆಗಳು ನಡೆಯುವುದಿಲ್ಲ’ ಅಂತಾ ಆರೋಪಿಸುತ್ತಾರೆ ಸ್ಥಳೀಯರು. ಹೀಗೆ, ಒಂದೆ ಬೀದಿ ಅಥವಾ ಅಕ್ಕಪಕ್ಕದ ಬೀದಿಗಳಲ್ಲಿ ಒಟ್ಟಿಗೆ ಹಲವು ಬೈಕ್‍ಗಳಲ್ಲಿ ಕಳುವು ಮಾಡಲಾಗುತ್ತಿದೆ.

ಸಿಎಂ ಮನೆ ಬಳಿಯೂ ಕೃತ್ಯ

ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಮನೆ ಇರುವ ಏರಿಯಾದಲ್ಲೂ ಪೆಟ್ರೋಲ್ ಕಳ್ಳರು ಕರಾಮತು ತೋರಿಸುತ್ತಿದ್ದಾರೆ. ವಿನೋಬನಗರದ ಮೂರನೆ ಮೇನ್‍ ಎರಡನೆ ಅಡ್ಡರಸ್ತೆಯ ಒಂದೆ ಮನೆಯಲ್ಲಿ ಆರು ವಾಹನಗಳಲ್ಲಿ ಪೆಟ್ರೋಲ್ ಕಳ್ಳತನ ಮಾಡಲಾಗಿದೆ.

‘ಪೆಟ್ರೋಲ್ ಕಳ್ಳತನವಾಗಿದೆ ಎಂದು ದೂರು ಕೊಟ್ಟ ರಾತ್ರಿಯೇ ಮತ್ತೊಮ್ಮೆ ಕಳುವಾಗಿದೆ. ಕಳ್ಳತನ ಮಾಡುವವರು ನಮ್ಮ ಬುಲೆಟ್‍ನ ಪಂಪ್ ಹಾನಿ ಮಾಡಿದ್ದಾರೆ. ಅದಕ್ಕೆ ಎಂಟು ಸಾವಿರ ರೂ. ಖರ್ಚಾಗುತ್ತದೆ. ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲೆ ವಿನೋಬನಗರ ಠಾಣೆ ಇದೆ. ಹತ್ತಿರದಲ್ಲೆ ಸಿಎಂ ಯಡಿಯೂರಪ್ಪ ಅವರ ಮನೆ ಇದೆ. ಇಲ್ಲಿಯು ಪೆಟ್ರೋಲ್ ಕಳ್ಳತನವಾಗುತ್ತಿದೆ ಎಂದರೆ ಆಶ್ಚರ್ಯವಾಗುತ್ತದೆ’ ಅನ್ನುತ್ತಾರೆ ವಿನೋಬನಗರದ ಯೋಗೇಶ್.

ಕಳ್ಳರ ಲೆಕ್ಕಾಚಾರವೇನು?

ರಾತ್ರಿ ವೇಳೆ ಜನ ಸಂಚಾರ ಕಡಿಮೆ. ಪೊಲೀಸರು ಗಸ್ತು ತಿರುಗಿ ಹೋದ ಬಳಿಕ ಕೃತ್ಯ ಎಸಗುವುದು ಸುಲಭ.

ನೂರು, ಇನ್ನೂರು ರುಪಾಯಿ ಪೆಟ್ರೋಲ್ ಕಳುವಾದರೆ ಯಾರೂ ದೂರು ಕೊಡುವುದಿಲ್ಲ ಎಂಬ ಭಂಡ ಧೈರ್ಯ.

ಒಂದೇ ರಾತ್ರಿ ಲೀಟರ್‍ಗಟ್ಟಲೆ ಪೆಟ್ರೋಲ್ ಕಳುವು ಮಾಡಿ, ಮಾರಾಟ ಮಾಡಿ ಸಾವಿರಾರು ರೂ. ಗಳಿಸಬಹುದು.

ಪೆಟ್ರೋಲ್ ಕಳ್ಳರ ಹಾವಳಿಗೆ ಶಿವಮೊಗ್ಗ ನಗರದ ವಾಹನ ಸವಾರರು ತತ್ತರಿಸಿ ಹೋಗಿದ್ದಾರೆ. ಪೆಟ್ರೋಲ್ ಬೆಲೆ ಗಗನ ಮುಟ್ಟಿದೆ. ವಾಹನಗಳಿಗೆ ನೂರು, ಇನ್ನೂರು ರೂ. ಪೆಟ್ರೋಲ್ ಹಾಕಿಸುವುದೆ ಕಷ್ಟಕರವಾಗಿದೆ. ಇಂತಹ ಸಂದರ್ಭ ಅಲ್ಪಸ್ವಲ್ಪ ಪೆಟ್ರೋಲ್‍ನತ್ತ ಕಳ್ಳರು ಕೆಂಗಣ್ಣು ಬೀರಿರುವುದು ವಾಹನ ಸವಾರರಿಗೆ ತಲೆನೋವು ತಂದಿದೆ. ಪೆಟ್ರೋಲ್ ಕಳ್ಳರ ಹೆಡೆಮುರಿ ಕಟ್ಟಲು ಪೊಲೀಸರು ಕ್ರಮ ವಹಿಸಬೇಕಿದೆ.

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : July 20, 2021 at 10:16 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಜುಲೈ 20, 2021

Leave a Comment