ಶಿವಮೊಗ್ಗ ಲೈವ್
ಶಿವಮೊಗ್ಗ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕ್ಲರ್ಕ್ ಹುದ್ದೆ ಕೊಡಿಸುವುದಾಗಿ ನಂಬಿಸಿ ಶಿವಮೊಗ್ಗದ ಮಹಿಳೆಯೊಬ್ಬರಿಂದ (ಹೆಸರು ಗೌಪ್ಯ) ಲಕ್ಷಾಂತರ ರೂಪಾಯಿ ಹಣ ಹಾಗೂ ಖಾಲಿ ಚೆಕ್ ಪಡೆದು ವಂಚಿಸಲಾಗಿದೆ.
ಪರಿಚಯವಿದ್ದ ದಂಪತಿ ಮತ್ತು ಬೆಂಗಳೂರಿನ ವ್ಯಕ್ತಿಯೊಬ್ಬನಿಂದ ಮಹಿಳೆ ಮೋಸ ಹೋಗಿದ್ದಾರೆ. ಆರೋಪಿಗಳ ಮಾತು ನಂಬಿ ವಿವಿಧ ಹಂತಗಳಲ್ಲಿ ಆರ್.ಟಿ.ಜಿ.ಎಸ್ ಹಾಗೂ ಫೋನ್ ಪೇ ಮೂಲಕ ಒಟ್ಟು ₹10 ಲಕ್ಷಕ್ಕೂ ಅಧಿಕ ಹಣವನ್ನು ಮಹಿಳೆ ನೀಡಿದ್ದಾರೆ. ಅಲ್ಲದೆ ಸಂಬಳ ಹಾಗೂ ನಾಮಿನಿ ವಿಚಾರವಾಗಿ ಎಂದು ನಂಬಿಸಿ ಎಸ್‌ಬಿಐ ಬ್ಯಾಂಕಿನ ಖಾಲಿ ಚೆಕನ್ನು ಸಹ ಪಡೆದುಕೊಂಡಿದ್ದರು ಎಂದು ಆರೋಪಿಸಲಾಗಿದೆ.

ಆರೋಪಿಗಳು ಕೆಲಸ ಕೊಡಿಸದೆ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆಗ ಮಹಿಳೆ ಕೊಟ್ಟ ಹಣವನ್ನು ಮರಳಿ ಕೇಳಿದ್ದಾರೆ. ಆಗ ಚೆಕ್ ಬೌನ್ಸ್ ನೋಟಿಸ್ ಕಳುಹಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಘಟನೆ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.