ಫೇಸ್‌ಬುಕ್‌ನಲ್ಲಿ ಮಾಡಿದ ಒಂದು ಕ್ಲಿಕ್‌ನಿಂದ ಶಿಕ್ಷಕಿಗೆ ಸಂಕಷ್ಟ, ಆಗಿದ್ದೇನು?

ಶಿವಮೊಗ್ಗ: ಫೇಸ್‌ಬುಕ್‌ನಲ್ಲಿ ಪ್ರಕಟವಾದ ಶೇರು ಮಾರುಕಟ್ಟೆ ಹೂಡಿಕೆ ಜಾಹೀರಾತು ನಂಬಿ ಶಾಲಾ ಶಿಕ್ಷಕಿಯೊಬ್ಬರು ₹6.85 ಲಕ್ಷ ಹಣ ಕಳೆದುಕೊಂಡಿದ್ದಾರೆ.

ಶಿಕ್ಷಕಿ ಫೇಸ್‌ಬುಕ್‌ ನೋಡುತ್ತಿದ್ದಾಗ ನುವಾಮಾ ವೆಲ್ತ್ ಮ್ಯಾನೇಜ್‌ಮೆಂಟ್ ಲಿಮಿಟೆಡ್ ಕಂಪನಿಯ ಹೆಸರಿನ ಜಾಹೀರಾತು ಕಾಣಿಸಿಕೊಂಡಿತ್ತು. ಆ ಜಾಹೀರಾತು ಕ್ಲಿಕ್ ಮಾಡಿದಾಗ ಶಿಕ್ಷಕಿಯ ವಾಟ್ಸಾಪ್ ಸಂಖ್ಯೆಯನ್ನು ಗ್ರೂಪ್‌ ಒಂದಕ್ಕೆ ಸೇರಿಸಲಾಗಿತ್ತು. ಬಳಿಕ ವೆಬ್‌ಸೈಟ್ ಒಂದರ ಲಿಂಕ್ ಕಳುಹಿಸಿ, ಗ್ರೂಪ್‌ನಲ್ಲಿ ಶೇರು ವಹಿವಾಟು ಹಾಗೂ ಹೂಡಿಕೆ ಕುರಿತು ಮಾಹಿತಿ ನೀಡಿದ್ದರು. ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಸಿಗುತ್ತದೆ ಎಂದು ನಂಬಿಸಿದ್ದಲ್ಲದೆ, ಗ್ರೂಪ್‌ನಲ್ಲಿದ್ದ ಇತರ ಸದಸ್ಯರು ಭಾರಿ ಲಾಭ ಪಡೆದಂತೆ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.  

SMS-Fraud-Shimoga-CEN-Police-Station.

ನಿಜ ಎಂದು ನಂಬಿದ ಶಿಕ್ಷಕಿ ಆ ಲಿಂಕ್ ಮೂಲಕ ಆಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ನಂತರ ಮತ್ತೊಂದು ವಾಟ್ಸಾಪ್ ಗ್ರೂಪ್‌ಗೆ ಶಿಕ್ಷಕಿಯ ನಂಬರ್‌ ಸೇರಿಸಿದ ವಂಚಕರು, ಹೂಡಿಕೆ ಮಾಡುವಂತೆ ಸೂಚಿಸಿದ್ದಾರೆ. ವಂಚಕರ ಮಾತು ನಂಬಿದ ಶಿಕ್ಷಕಿ, ಸೆಪ್ಟೆಂಬರ್ 10 ರಿಂದ ಸೆಪ್ಟೆಂಬರ್ 22ರ ಮಧ್ಯೆ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ₹6,85,000 ಹಣವನ್ನು ವರ್ಗಾಯಿಸಿದ್ದಾರೆ. ಯಾವುದೇ ಲಾಭಾಂಶ ಕೈ ಸೇರದೆ ಇದ್ದಾಗ ಅನುಮಾನ ಮೂಡಿದ್ದು ಪರಿಚಿತರ ಬಳಿ ವಿಚಾರಿಸಿದಾಗ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ.ಇ.ಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.