ಶಿವಮೊಗ್ಗದಲ್ಲಿ ಲಿಫ್ಟ್‌ ದುರಂತ, ಅಸ್ವಸ್ಥಗೊಂಡಿದ್ದ ನಿವೃತ್ತ ಇಂಜಿನಿಯರ್‌ ಸಾವು, ಹೇಗಾಯ್ತು ಘಟನೆ?

ಶಿವಮೊಗ್ಗ: ನಗರದ 100 ಅಡಿ ರಸ್ತೆಯ ರೋಟರಿ ರಕ್ತನಿಧಿ ಬಳಿ ಇರುವ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಲಿಫ್ಟ್ ಅವಘಡದಲ್ಲಿ ನಿವೃತ್ತ ಇಂಜಿನಿಯರ್ ಕುಮಾರಸ್ವಾಮಿ ಅವರು ಅಸ್ವಸ್ಥಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ದೇಗುಲದ ಗರ್ಭಗುಡಿಯ ಹಿಂಭಾಗದಲ್ಲಿ ಹಳೆ ಮಾದರಿಯ ಮ್ಯಾನುಯಲ್ ಲಿಫ್ಟ್ ವ್ಯವಸ್ಥೆ ಇದೆ. ಲಿಫ್ಟ್ ನೆಲ ಮಹಡಿಯಲ್ಲಿ ಇಲ್ಲದಿದ್ದರೂ ಬಾಗಿಲು ತೆರೆದಿದ್ದರಿಂದ, ಕುಮಾರಸ್ವಾಮಿ ಅವರು ಲಿಫ್ಟ್ ಬಂದಿದೆ ಎಂದು ಭಾವಿಸಿ ಒಳಗೆ ಪ್ರವೇಶಿಸಿದ್ದಾರೆ. ಅದೇ ಸಮಯದಲ್ಲಿ ಲಿಫ್ಟ್ ಮೇಲಿನಿಂದ ಕೆಳಕ್ಕೆ ಬಂದ ಪರಿಣಾಮ ಅವರು ಲಿಫ್ಟ್‌ನ ಅಡಿಯಲ್ಲಿ ಸಿಲುಕಿಕೊಂಡಿದ್ದರು.

Lift-Incidenta-at-Dattatreya-Temple-at-100-feet-road-in-Shivmaogga

ರಕ್ಷಣಾ ಕಾರ್ಯಾಚರಣೆ

ವಿಷಯ ತಿಳಿದ ಕೂಡಲೇ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿ, ಲಿಫ್ಟ್ ಅಡಿಯಲ್ಲಿದ್ದ ಕುಮಾರಸ್ವಾಮಿ ಅವರನ್ನು ಹೊರತೆಗೆದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ. ಜಯನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.