ಶಿವಮೊಗ್ಗ: ನಗರದ ಎಪಿಎಂಸಿ ಯಾರ್ಡ್ನಿಂದ ಗುಜರಾತ್ಗೆ ಅಡಿಕೆ ಕೊಂಡೊಯ್ದ ಲಾರಿ ನಾಪತ್ತೆಯಾಗಿದೆ. ಚಾಲಕನ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಲಾರಿಯ ಜಿಪಿಎಸ್ ಸಂಪರ್ಕವು ಕಡಿತವಾಗಿದೆ ಎಂದು ಆರೋಪಿಸಲಾಗಿದೆ.
ಆಗಸ್ಟ್ 7ರಂದು ಎಪಿಎಂಸಿಯ ಮಂಡಿಯಿಂದ ಅಂದಾಜು ₹77,17,500 ಮೌಲ್ಯದ 24,500 ಕೆ.ಜಿ ತೂಕದ 350 ಅಡಿಕೆ ಚೀಲಗಳನ್ನು ಲಾರಿಗೆ ಲೋಡ್ ಮಾಡಲಾಗಿತ್ತು. ಚಾಲಕ ಅಲ್ಲಾಭಕ್ಷಿ ಎಂಬಾತ ಲಾರಿಯನ್ನು ಶಿವಮೊಗ್ಗದಿಂದ ಗುಜರಾತ್ ರಾಜ್ಯದ ಅಹಮದಾಬಾದ್ಗೆ ಕೊಂಡೊಯ್ದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮಾರ್ಗ ಮಧ್ಯೆ ಚಾಲಕನ ಮೊಬೈಲ್ ಸ್ವಿಚ್ ಆಫ್ ಆಗಿದೆ. ಲಾರಿಯ ಜಿಪಿಎಸ್ ಸಂಪರ್ಕವು ಕಡಿತವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ಸಂಬಂಧ ಲಾರಿ ಮಾಲೀಕ ದೂರು ನೀಡಿದ್ದು, ₹77,17,500 ಲಕ್ಷ ಅಡಿಕೆ, ₹21 ಲಕ್ಷ ಮೌಲ್ಯದ ಲಾರಿ ಸೇರಿ ಒಟ್ಟು ₹98.17 ಮೌಲ್ಯದ ವಸ್ತು ಕಳುವಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಚಾಲಕ ಸಂಪರ್ಕಕ್ಕೆ ಸಿಗಬಹುದು ಎಂದು ಕಾದಿದ್ದ ಮಾಲೀಕರು ತಡವಾಗಿ ದೂರು ನೀಡಿದ್ದಾರೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.