ಶಿವಮೊಗ್ಗ: ಸೋಗೆನೆ ಗ್ರಾಮದ ಅಂತರಘಟ್ಟಮ್ಮ ದೇವಸ್ಥಾನದ ಬಾಗಿಲು ಮುರಿದು ಕಳ್ಳತನ ಮಾಡಿದ್ದ ಆರೋಪದ ಹಿನ್ನೆಲೆ ಓರ್ವ ಯುವಕನನ್ನು ಗ್ರಾಮಸ್ಥರೆ ಹಿಡಿದ್ದಾರೆ. ಇನ್ನೊಂದಡೆ, ತನ್ನ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಯುವಕ ಆರೋಪಿಸಿದ್ದಾನೆ. ಘಟನೆ ಸಂಬಂಧ ದೂರು, ಪ್ರತಿದೂರು ದಾಖಲಾಗಿವೆ. ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ಕೇಸ್ 1
ದೇವಸ್ಥಾನದಲ್ಲಿ ಕಳ್ಳತನ
ಸೋಗೆನೆ ಗ್ರಾಮದಲ್ಲಿರುವ ಅಂತರಘಟ್ಟಮ್ಮ ದೇವಸ್ಥಾನದಲ್ಲಿ ಆಗಸ್ಟ್ 30ರ ಮಧ್ಯಾಹ್ನ ಕಳ್ಳತನವಾಗಿತ್ತು. ದೇವಸ್ಥಾನದ ಬಾಗಿಲು ಒಡೆದು ಒಳಗೆ ನುಗ್ಗಿದ ಯುವಕನೊಬ್ಬ ದೇವಿಗೆ ತೊಡಿಸುವ ಅಂದಾಜು ₹10,000 ಮೌಲ್ಯದ 1 ಗ್ರಾಂ ಚಿನ್ನದ ತಾಳಿ ಮತ್ತು ₹600 ಮೌಲ್ಯದ 3 ಗ್ರಾಂ ತೂಕದ ಎರಡು ಬೆಳ್ಳಿ ತಾಳಿಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ.
ಗ್ರಾಮಸ್ಥರಿಗೆ ಭದ್ರಾವತಿ ತಾಲ್ಲೂಕಿನ ಸಿರಿಯೂರು ಗ್ರಾಮದಲ್ಲಿದ್ದ ಯುವಕನನ್ನು ವಶಕ್ಕೆ ಪಡೆದು, ನಿದಿಗೆ ಗ್ರಾಮಕ್ಕೆ ಕರೆತಂದು ವಿಚಾರಣೆ ನಡೆಸಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಬಂದಿದ್ದು ಅವರಿಗೆ ಒಪ್ಪಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕೇಸ್ 2
ಗ್ರಾಮಸ್ಥರ ವಿರುದ್ಧ ಯುವಕನ ದೂರು
ಇನ್ನೊಂದೆಡೆ ಯುವಕನು ಗ್ರಾಮದ ಕೆಲವರ ವಿರುದ್ಧವೆ ದೂರ ನೀಡಿದ್ದಾನೆ. ಭದ್ರಾವತಿ ತಾಲ್ಲೂಕಿನ ಸಿರಿಯೂರಿನಲ್ಲಿದ್ದ ತನ್ನ ಜೊತೆಗೆ ಮಾತನಾಡಬೇಕು ಎಂದು ಕೆಲವರು ನಿದಿಗೆ ಗ್ರಾಮಕ್ಕೆ ಕರೆದು ತಂದರು. ಅಲ್ಲಿ ಚೌಡಮ್ಮ ದೇವಸ್ಥಾನದ ಬಳಿ ಹಲ್ಲೆ ನಡೆಸಿದರು. ಕಳ್ಳತನ ಮಾಡಿದ ವಸ್ತುಗಳನ್ನು ಹಿಂತಿರುಗಿಸುವುದಾಗಿ ತಿಳಿಸಿದರೂ ದೊಣ್ಣೆಗಳಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ. ತನ್ನ ತಂದೆ ಸ್ಥಳಕ್ಕೆ ಬಂದಿದ್ದನ್ನ ಗಮನಿಸಿ ಅವರೆಲ್ಲ ಅಲ್ಲಿಂದ ಹೋದರು.
ವಿಷಯ ತಿಳಿದು ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ತನ್ನನ್ನು ವಶಕ್ಕೆ ಪಡೆದು, ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ಆತ ದೂರಿನಲ್ಲಿ ಆರೋಪಿಸಿದ್ದಾನೆ. ಸದ್ಯ, ಘಟನೆ ಸಂಬಂಧ ದೂರು, ಪ್ರತಿದೂರು ದಾಖಲಾಗಿದ್ದು ತುಂಗಾ ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.