ಶಿವಮೊಗ್ಗ: ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದ ಆವರಣದ ಒಳಗೆ ಪ್ರವೇಶಿಸಿ, ಕಾರಾಗೃಹದ ಒಳಗಡೆ ನಿಷೇಧಿತ ವಸ್ತು ಎಸೆಯಲು ಯತ್ನಿಸಿದ ಘಟನೆ ನಡೆದಿದೆ. ಪ್ರಕರಣ ಸಂಬಂಧ ಒಬ್ಬನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. (ಈ ಸುದ್ದಿಯನ್ನು ಇನ್ನು 61 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ನಗರದ ಬಸವನಗುಡಿಯ ಹೊನ್ನೇಶ ಪಿ.ಜಿ. (26) ಎಂಬಾತನನ್ನು ಜೈಲು ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಇನ್ನಿಬಬರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಏನಿದು ಪ್ರಕರಣ? ಆಗಿದ್ದೇನು?
ಅಕ್ಟೋಬರ್ 28ರ ಮಧ್ಯಾಹ್ನ ಕಾರಾಗೃಹದ ಆವರಣದ ಒಳಗೆ ವ್ಯಕ್ತಿಯೊಬ್ಬ ಕವರ್ ಹಿಡಿದು ಓಡಾಡುತ್ತಿರುವುದನ್ನು ಕೆಎಸ್ಐಎಸ್ಎಫ್ ಭದ್ರತಾ ಸಿಬ್ಬಂದಿ ಗಮನಿಸಿದ್ದರು. ಆತನನ್ನು ಹಿಡಿಯಲು ಸಿಬ್ಬಂದಿ ಬೆನ್ನಟ್ಟಿದಾಗ, ಕಾರಾಗೃಹದ ನಿರ್ಮಾಣ ಹಂತದ ಕಾಂಪೌಂಡ್ ಹಾರಿ ಸಮೀಪದ ನೀಲಗಿರಿ ತೋಪಿನ ಕಡೆಗೆ ಓಡಿದ್ದ.
ಸುತ್ತಮುತ್ತ ಶೋಧ ಕಾರ್ಯ
ಭದ್ರತಾ ಸಿಬ್ಬಂದಿ ಕಾರಾಗೃಹದ ಸುತ್ತಮುತ್ತ ಶೋಧ ಕಾರ್ಯ ನಡೆಸಿದರು. ಈ ವೇಳೆ ಸಿರಿಯೂರು ರಸ್ತೆ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಹೊನ್ನೇಶ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಆಗ ಆತ ತಾನು ಕರೀಂ ಮತ್ತು ಪುನೀತ್ ಎಂಬುವವರ ಜೊತೆಗೆ ದ್ವಿಚಕ್ರ ವಾಹನದಲ್ಲಿ ಬಂದು ಕಾರಾಗೃಹದ ಒಳಗಡೆ ನಿಷೇಧಿತ ವಸ್ತುವನ್ನು ಎಸೆಯಲು ಯತ್ನಿಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಉಲ್ಲೇಖಿಸಲಾಗಿದೆ.
ಕಾರಾಗೃಹದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಜೈಲಿನ ಆವರಣಕ್ಕೆ ನುಗ್ಗಿ ಕವರ್ ಹಿಡಿದುಕೊಂಡು ಓಡಾಡಿದ್ದ ವ್ಯಕ್ತಿ ಕರೀಂ ಎಂಬುದು ಧೃಡಪಟ್ಟಿದೆ. ಇನ್ನು ಘಟನೆ ಬಳಿಕ ಆರೋಪಿಗಳಾದ ಕರೀಂ ಹಾಗೂ ಪುನೀತ್ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ಸಂಬಂಧ ಕಾರಾಗೃಹದ ಮುಖ್ಯ ಅಧೀಕ್ಷಕರು ನೀಡಿರುವ ದೂರಿನ ಹಿನ್ನೆಲೆ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.