THIRTHAHALLI, 1 SEPTEMBER 2024 : ಯುವಕನೊಬ್ಬ (youth) ಸಂಶಯಾಸ್ಪದ ರೀತಿಯಲ್ಲಿ ನಾಪತ್ತೆಯಾಗಿದ್ದಾನೆ. ಇದಕ್ಕು ಮೊದಲು ಆತ ಹಾಕಿರುವ ವಾಟ್ಸಪ್ ಸ್ಟೇಟಸ್ ಕುಟುಂಬದವರು, ಸ್ನೇಹಿತರಲ್ಲಿ ಆತಂಕ ಮೂಡಿಸಿದೆ. ತೀರ್ಥಹಳ್ಳಿಯ ತುಂಗಾ ನದಿ ಸಮೀಪ ಆತನ ಬೈಕ್ ಪತ್ತೆಯಾಗಿದೆ. ಹಾಗಾಗಿ ಯುವಕ ಹೊಳೆಗೆ ಜಿಗಿದಿರುವ ಶಂಕೆಯಲ್ಲಿ ಶೋಧ ಕಾರ್ಯ ನಡೆಸಲಾಯಿತು.
ಇಂದಾವರ ನಿವಾಸಿ ಜಯದೀಪ (24) ನಾಪತ್ತೆಯಾಗಿದ್ದಾನೆ. ಈತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
» ವಾಟ್ಸಪ್ ಸ್ಟೇಟಸ್ನಲ್ಲಿ ಏನಿದೆ?
ಜಯದೀಪ್ ತನ್ನ ವಾಟ್ಸಪ್ ಸ್ಟೇಟಸ್ನಲ್ಲಿ ಮೂರು ಪುಟದ ಪತ್ರ ಅಪ್ಲೋಡ್ ಮಾಡಿದ್ದಾನೆ. ಇದರಲ್ಲಿ ಮೂರು ಪ್ರಮುಖ ವಿಚಾರ ಪ್ರಸ್ತಾಪಿಸಿದ್ದಾನೆ. ಆನ್ಲೈನ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡಿ ಸಿಲುಕಿದ್ದು, 90 ಸಾವಿರ ರೂ. ಸಾಲ ಮಾಡಿದ್ದಾಗಿ ತಿಳಿಸಿದ್ದಾನೆ. ಇನ್ನು, ಈ ಬಾರಿ ಪದವಿಯಲ್ಲಿ ರಾಂಕ್ ಪಡೆಯುವ ಸಾಧ್ಯತೆ ಇತ್ತು. ಆದರೆ ಇನ್ಮುಂದೆ ಅದು ನೆನಪಷ್ಟೆ. 24 ವರ್ಷವಾದರು ಲವರ್ ಇಲ್ಲ. ಒನ್ ಸೈಡ್ ಲವ್ ಮಾಡಿದ್ದೆ. ಆಕೆ ಒಪ್ಪಲಿಲ್ಲ ಎಂದು ಬರೆದುಕೊಂಡಿದ್ದಾನೆ. ಒಳ್ಳೆಯ ಕೆಲಸ ಹುಡುಕುವಲ್ಲಿ ವಿಫಲನಾಗಿದ್ದು ಸಾಲ ಹೆಚ್ಚಾಗಿದೆ ಎಂದು ಪ್ರಕಟಿಸಿದ್ದಾನೆ.
» ಹೊಳೆ ಬಳಿ ಪತ್ತೆಯಾಯ್ತು ಬೈಕ್
ವಾಟ್ಸಪ್ ಸ್ಟೇಟಸ್ ಪ್ರಕಟಿಸಿ ನಾಪತ್ತೆಯಾಗಿರುವ ಜಯದೀಪ್ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಮಧ್ಯೆ ಕುರುವಳ್ಳಿಯ ತುಂಗಾ ನದಿ ಸೇತುವೆ ಬಳಿ ಜಯದೀಪ್ನ ಪಲ್ಸರ್ ಬೈಕ್ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಅಧಿಕಾರಿಗಳು ತುಂಗಾ ನದಿಯಲ್ಲಿ ಶೋಧ ಕಾರ್ಯ ನಡೆಸಿದರು. ಆದರೆ ನೀರು ಹರಿವು ಹೆಚ್ಚಳವಾಗಿದೆ. ಹಾಗಾಗಿ ಒಂದು ಸುತ್ತಿನ ಕಾರ್ಯಾಚರಣೆ ನಡೆಸಿದರು.
» ಟ್ರೇಡಿಂಗ್ನಲ್ಲಿ ಮೋಸದ ಶಂಕೆ
ಮಾಧ್ಯಮಗಳ ಜೊತೆ ಮಾತನಾಡಿದ ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ, ಯುವಕನ ಪತ್ತೆ ಕಾರ್ಯಕ್ಕೆ ಮೊದಲ ಆದ್ಯತೆ ನೀಡಿದ್ದೇವೆ. ಆತ ನೀರಿಗೆ ಜಿಗಿದಿರುವ ಶಂಕೆ ಹಿನ್ನೆಲೆ ಅಗ್ನಿಶಾಮಕ ದಳ ಶೋಧ ಕಾರ್ಯ ನಡೆಸಿತು. ‘ನನಗೆ ಆನ್ಲೈನ್ ಟ್ರೇಡಿಂಗ್ನಲ್ಲಿ ಮೋಸವಾಗಿದೆ. ಅಪ್ಪ, ಅಮ್ಮ ನನ್ನನ್ನು ಕ್ಷಮಿಸಿ. ನನಗೆ ಬೇರೆ ದಾರಿ ಇಲ್ಲ’ ಅಂತಾ ವಾಟ್ಸಪ್ ಸ್ಟೇಟಸ್ ಪ್ರಕಟಿಸಿದ್ದಾನೆ. ಆನ್ಲೈನ್ ಟ್ರೇಡಿಂಗ್ನಲ್ಲಿ ಯುವಕನಿಗೆ ವಂಚನೆಯಾಗಿರುವ ಶಂಕೆ ಇದೆ. ಅದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸದ್ಯ ಜಯದೀಪ್ಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಇನ್ನೊಂದೆಡೆ ಆನ್ಲೈನ್ ಟ್ರೇಡಿಂಗ್ ಕುರಿತು ಎಚ್ಚರ ವಹಿಸುವಂತೆ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಇದನ್ನೂ ಓದಿ ⇒ GOOD MORNING ಶಿವಮೊಗ್ಗ | ಇಡೀ ದಿನದ ಸುದ್ದಿ ಒಂದೇ ಕ್ಲಿಕ್ನಲ್ಲಿ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200