ಶಿವಮೊಗ್ಗ: ನಗರದ ಎನ್‌ಟಿ ರಸ್ತೆಯ ಪೆಟ್ರೋಲ್ ಬಂಕ್ ಒಂದರಲ್ಲಿ ಮೂತ್ರ ವಿಸರ್ಜನೆ ವಿಚಾರವಾಗಿ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಚಾಕು ಹಾಗೂ ಸ್ಕ್ರೂಡ್ರೈವರ್‌ನಿಂದ ಹಲ್ಲೆ ನಡೆಸಿರುವ ಘಟನೆ ನಡೆಸಲಾಗಿದೆ.
ರೈಲ್ವೆ ಗೂಡ್ಸ್ ಶೆಡ್ ಹಮಾಲಿ ಕಾರ್ಮಿಕ ಫೈರೋಜ್ ಖಾನ್ (46) ಹಲ್ಲೆಗೊಳಗಾದವರು. ಜುಲೈ 22ರ ರಾತ್ರಿ ಎನ್‌ಟಿ ರಸ್ತೆಯ ಬೈಪಾಸ್ ಬಳಿಯ ಗುರು ನಾಗಭೂಷಣ್ ಪೆಟ್ರೋಲ್ ಬಂಕ್‌ನ ಬಾತ್‌ರೂಮ್‌ಗೆ ಫೈರೋಜ್ ಖಾನ್ ತೆರಳಿದ್ದರು. ಈ ವೇಳೆ ಹೊರಗಿನಿಂದ ಬಾಗಿಲು ತಟ್ಟಿದ ಅಪರಿಚಿತ ವ್ಯಕ್ತಿಯೊಬ್ಬ ಬೇಗ ಬರುವಂತೆ ಗದರಿದ್ದಾನೆ ಎಂದು ಆರೋಪಿಸಲಾಗಿದೆ.

ಹೊರಗೆ ಬಂದ ಬಳಿಕ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಆಕ್ರೋಶಗೊಂಡ ಆರೋಪಿಗಳಿಬ್ಬರು ಸೊಂಟದಲ್ಲಿದ್ದ ಸ್ಕ್ರೂಡ್ರೈವರ್ ಮತ್ತು ಚಾಕುವಿನಿಂದ ಫೈರೋಜ್ ಖಾನ್ ಅವರ ಬೆನ್ನಿಗೆ ಹಾಗೂ ಮೈಮೇಲೆ ಇರಿದು ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಫೈರೋಜ್ ಖಾನ್‌ನನ್ನು ಸ್ನೇಹಿತ ಮುಬಾರಕ್ ಪಾಷಾ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.