ಶಿವಮೊಗ್ಗ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಗಸ್ಟ್ ತಿಂಗಳು ಪೂರ್ತಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇ.50ರ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ತಿಳಿಸಿದ್ದಾರೆ.➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ ಪುಸ್ತಕ ಮಳಿಗೆ, ಎಲ್ಲಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗಳು ಹಾಗೂ ಪ್ರಾಧಿಕಾರದಿಂದ ತೆರೆಯಲಾದ ಎಲ್ಲಾ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಈ ವಿಶೇಷ ರಿಯಾಯಿತಿ ಸೌಲಭ್ಯ ದೊರೆಯಲಿದೆ. ಇದರೊಂದಿಗೆ ಪ್ರಾಧಿಕಾರದ ಅಧಿಕೃತ ಜಾಲತಾಣವಾದ https://kpp.Karnataka.gov.in ಆನ್‌ಲೈನ್ ಪುಸ್ತಕ ಖರೀದಿ ವಿಭಾಗದಲ್ಲೂ ಈ ರಿಯಾಯಿತಿ ಲಭ್ಯವಿರಲಿದೆ.

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವ್ಯಕ್ತಿಚಿತ್ರಗಳು, ನಾಟಕಗಳು, ಅಲೆಮಾರಿ ಸಮುದಾಯ, ವೈದ್ಯಕೀಯ, ಪ್ರಾಚೀನ ಕನ್ನಡ ಸಾಹಿತ್ಯ, ಜಾನಪದ ಹಾಗೂ ಪರಿಸರ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಸುಮಾರು 769 ಶೀರ್ಷಿಕೆಗಳ ಮೌಲಿಕ ಕೃತಿಗಳನ್ನು ಪ್ರಾಧಿಕಾರವು ಇದುವರೆಗೆ ಪ್ರಕಟಿಸಿದೆ. ಪ್ರಾಜ್ಞರಿಂದ ರಚಿತವಾದ ಈ ಕೃತಿಗಳನ್ನು ಜನಸಾಮಾನ್ಯರಿಗೆ ಕಡಿಮೆ ಬೆಲೆಯಲ್ಲಿ ತಲುಪಿಸುವ ಸದುದ್ದೇಶದಿಂದ ಈ ರಿಯಾಯಿತಿ ಘೋಷಿಸಲಾಗಿದ್ದು, ಪುಸ್ತಕ ಪ್ರಿಯರು ಈ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.