ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 13 DECEMBER 2022
ಶಿವಮೊಗ್ಗ : ಮಾಂಡೌಸ್ ಚಂಡಮಾರುತದ ಅಬ್ಬರ ಕಡಿಮೆಯಾಗಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ತಗ್ಗಿದ್ದು, ಬಿಸಿಲು ಕಾಣಿಸಿಕೊಂಡಿದೆ. ಈ ನಡುವೆ ಜಿಲ್ಲಾಡಳಿತ ಬೆಳೆ ಹಾನಿ (crop loss) ಕುರಿತು ಸಮೀಕ್ಷೆ ನಡೆಸುತ್ತಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಮಾಂಡೌಸ್ ಚಂಡಮಾರುತದ ಅಬ್ಬರಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಒಂದು ವಾರ ಮಳೆಯಾಗಿದೆ. ತೀವ್ರ ಚಳಿಯು ಆವರಿಸಿತ್ತು.
crop loss
ಬಿಸಿಲು ಕಂಡು ನಿಟ್ಟುಸಿರು
ನಾಲ್ಕೈದು ದಿನದಿಂದ ಮೋಡ ಕವಿದ ವಾತಾವರಣ ಇತ್ತು. ಮೈಕೊರೆಯುವ ಚಳಿ ಜೊತೆಗೆ ಮಳೆಯು ಅಬ್ಬರಿಸಿತ್ತು. ಇದರಿಂದ ಜನರು ಹೈರಾಣಾಗಿದ್ದರು. ಇವತ್ತು ಜಿಲ್ಲೆಯಲ್ಲಿ ಬಿಸಿಲು ಕಾಣಿಸಿಕೊಂಡಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಬೆಳಗ್ಗೆಯಿಂದ ಮೋಡ ಸರಿದಿದ್ದು, ಸೂರ್ಯ ಪ್ರತ್ಯಕ್ಷವಾಗಿದ್ದಾನೆ.
crop loss
ಗದ್ದೆಗಳತ್ತ ಮುಖ ಮಾಡಿದ ರೈತರು
ಮಳೆಗೆ ಜಿಲ್ಲೆಯಾದ್ಯಂತ ಬೆಳೆ ಹಾನಿ ಸಂಭವಿಸಿದೆ. ಗದ್ದೆ ಕೊಯ್ಲು ಹೊತ್ತಿಗೆ ಮಳೆ ಸುರಿದಿದ್ದರಿಂದ ಹಲವೆಡೆ ಭತ್ತದ ಬೆಳೆ ಹಾನಿಯಾಗಿದೆ. ಹಲವು ರೈತರು ಕೊಯ್ಲು ಮಾಡಲು ಸಿದ್ಧತೆ ನಡೆಸಿದ್ದರು. ಈಗ ಭತ್ತ ಹಸಿಯಾಗಿದ್ದು, ಗದ್ದೆಗಳು ಕೆಸರುಮಯವಾಗಿದೆ. ಕೊಯ್ಲು ಮಾಡಿದವರಿಗೆ ಒಕ್ಕಲು ಮಾಡಲಾಗದ ಸ್ಥಿತಿ ಇತ್ತು.
ಸಾಗರ ತಾಲೂಕು ಆನಂದಪುರ ಸುತ್ತಮುತ್ತ ಬೆಳೆ ಹಾನಿಯಾಗಿದೆ. ಹೊಸಕೊಪ್ಪ, ಕಣ್ಣೂರು, ಭೈರಾಪುರ, ಸಂಗಣ್ಣನಕೆರೆ, ಹಿರೇಹಾರಕ, ಅಂದಾಸುರ, ಬಳ್ಳೀಬೈಲು, ಅಡೂರು, ಹೊಸಗುಂದ, ಐಗಿನಬೈಲು, ಚೆನ್ನಶೆಟ್ಟಿಕೊಪ್ಪ ಗ್ರಾಮಗಳಲ್ಲಿ ಭತ್ತದ ಬೆಳೆ ಹಾನಿಯಾಗಿದೆ.
ತೀರ್ಥಹಳ್ಳಿಯ ಮಂಡಗದ್ದೆ, ಅಗ್ರಹಾರ, ಕಸಬಾ ಮತ್ತು ಮತ್ತೂರು ಹೋಬಳಿಯಲ್ಲಿ ಗದ್ದೆ ಕೊಯ್ಲು ಮಾಡಲಾಗಿದೆ. ಮಳೆಗೆ ಫಸಲು ಗದ್ದೆಯಲ್ಲೇ ತೊಯ್ದು ಹೋಗಿದೆ. ಮಳೆ ಮುಂದುವರೆದರೆ ಗದ್ದೆಯಲ್ಲೆ ಮೊಳಕೆ ಬರುವ ಆತಂಕ ರೈತರದ್ದಾಗಿದೆ.
ಹೊಸನಗರ ತಾಲೂಕಿನಲ್ಲಿಯು ಬೆಳೆಹಾನಿ ಸಂಭವಿಸಿದೆ. ನಗರ ಹೋಬಳಿಯ ಅರಮನೆ ಕೊಪ್ಪ, ಮೂಡುಗೊಪ್ಪ, ಬೇಳೂರು, ಹೆಬ್ಬುರುಳಿ, ಅಂಡಗದೋದೂರು, ಹುಂಚ, ಕೆರೆಹಳ್ಳಿ ಸೇರಿದಂತೆ ವಿವಿಧೆಡೆ ಬೆಳೆ ಹಾನಿಯಾಗಿದೆ.
ಇದನ್ನು ಓದಿ – ಲಕ್ಷ ಲಕ್ಷದ ಸುಪಾರಿ ಕೊಟ್ಟು ತಂದೆಯನ್ನೆ ಕೊಲ್ಲಿಸಿದ ಮಕ್ಕಳು, ಒಬ್ಬ ಪೊಲೀಸ್ ಸೇರಿ 5 ಅರೆಸ್ಟ್
‘ಪ್ರಾಥಮಿಕ ಮಾಹಿತಿ ಪ್ರಕಾರ ಹೊಸನಗರ, ತೀರ್ಥಹಳ್ಳಿ ತಾಲೂಕಿನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಉಳಿದ ತಾಲೂಕಿನಲ್ಲಿ ದೊಡ್ಡ ಮಟ್ಟದ ಹಾನಿಯಾಗಿಲ್ಲ. ಈ ಕುರಿತು ಸಮೀಕ್ಷ ನಡೆಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ತಿಳಿಸಿದರು.
ಮುಗ್ಗಲು ಬಂದ ಅಡಕೆ
ಅಡಕೆ ಬೆಳೆಗಾರರಿಗೆ ಈ ಮಳೆ, ಗಾಯದ ಮೇಲೆ ಬರೆ ಎಳೆದಿದೆ. ಎಲೆ ಚುಕ್ಕೆ ರೋಗದಿಂದ ಇಳುವರಿ ಕಡಿಮೆಯಾಗಿದೆ. ಈಗ ಕೊಯ್ಲು ಮುಗಿಸಿ ಅಡಕೆಯನ್ನು ಬೇಯಿಸಿ ಒಣಗಿಸುವ ಹೊತ್ತಿಗೆ ಮಳೆ ಸುರಿದಿದೆ. ಅಡಕೆಯನ್ನು ಒಣಗಿಸಲು ಬಿಸಿಲು ಇಲ್ಲದೆ ಇಟ್ಟಲ್ಲೆ ಇಟ್ಟು ಮುಗ್ಗಲು ಬಂದಿದೆ. ಅಡಕೆ ಮೇಲೆ ಬಿಳಿ ಫಂಗಸ್ ಕಾಣಿಸಿದ್ದು, ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ.
ಇವತ್ತು ಕೊಂಚ ಬಿಸಿಲು ಕಾಣಿಸುತ್ತಿದ್ದಂತೆ ರೈತರು ಅಡಕೆ ಒಣಗಿಸುತ್ತಿದ್ದಾರೆ. ಆದರೆ ಯಾವಾಗ ಮಳೆ ಹನಿ ಬೀಳುತ್ತದೆಯೋ ಎಂದು ಅಡಕೆ ಮುಂದೆ ಕಾದು ಕೂರಬೇಕಾದ ಅನಿವಾರ್ಯತೆ ಇದೆ.
ಸಮೀಕ್ಷೆ ನಡೆಸುತ್ತಿರುವ ಅಧಿಕಾರಿಗಳು
ಮೌಂಡೌಸ್ ಚಂಡ ಮಾರುತದಿಂದ ಬೆಳೆ ಹಾನಿ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಎಲ್ಲಾ ತಾಲೂಕಿನಲ್ಲಿ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡುತ್ತಿದ್ದಾರೆ.
ಇದನ್ನು ಓದಿ – ಅಡಕೆ ರೇಟ್ ಕುಸಿಯಲು 3 ಕಾರಣ ಪಟ್ಟಿ ಮಾಡಿದ ಕಾಂಗ್ರೆಸ್, ಏನದು ಕಾರಣ?
‘ಭತ್ತ ಹಾನಿಗೊಳಗಾದ ಬಗ್ಗೆ ಮಾಹಿತಿ ಇದೆ. ಹಾಗಾಗಿ ಆಯಾ ತಾಲೂಕಿನ ಬೆಳೆ ಹಾನಿ ಕುರಿತು ಖುದ್ದಾಗಿ ಸ್ಥಳಕ್ಕೆ ತೆರಳಿ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಂದಾಯ ಮತ್ತು ಕೃಷಿ ಇಲಾಖೆಯ ಜಂಟಿ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ತಿಳಿಸಿದರು.