ಪರಿಶಿಷ್ಟ ಜಾತಿ, ಪಂಗಡದ ರೈತರಿಂದ ಅರ್ಜಿ ಆಹ್ವಾನ, ಮೆಸ್ಕಾಂ ಮಾಹಿತಿ

ಶಿವಮೊಗ್ಗ: ತಾಲ್ಲೂಕು ಮೆಸ್ಕಾಂ ಗ್ರಾಮೀಣ ಉಪವಿಭಾಗದ ವ್ಯಾಪ್ತಿಗೆ ಒಳಪಡುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ (ಎಸ್‌ಸಿ/ಎಸ್‌ಟಿ) ರೈತರಿಂದ 2026-27ನೇ ಸಾಲಿನ ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆ ಅಡಿ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. (ಶಿವಮೊಗ್ಗ ಲೈವ್‌.ಕಾಂ | ಮುಂದಿನ 4 ಪ್ಯಾರಾಗಳು ಕೆಳಗಿವೆ)

ಅರ್ಹ ರೈತರು ನವೆಂಬರ್ 6ರ ಒಳಗೆ ಮೆಸ್ಕಾಂ ಗ್ರಾಮೀಣ ಉಪವಿಭಾಗದ ಕಚೇರಿಗೆ ನೇರವಾಗಿ ತೆರಳಿ ಅರ್ಜಿ ಸಲ್ಲಿಸಬಹುದಾಗಿದೆ. ಭರ್ತಿ ಮಾಡಿದ ಅರ್ಜಿಯೊಂದಿಗೆ ಇತ್ತೀಚಿನ ಪಹಣಿ ಪ್ರತಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಬಿಪಿಎಲ್ ರೇಷನ್ ಕಾರ್ಡ್ ಪ್ರತಿ, ಫಲಾನುಭವಿ ಬೋರ್‌ವೆಲ್ ಪಕ್ಕದಲ್ಲಿ ನಿಂತಿರುವ ಜಿಪಿಎಸ್ ಫೋಟೋ ಹಾಗೂ 2 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು ಎಂದು ತಿಳಿಸಲಾಗಿದೆ.

Mescom-office-in-Shimoga

ಸಲ್ಲಿಕೆಯಾದ ಅರ್ಜಿಗಳನ್ನು ಸರ್ಕಾರದ ಮಾನದಂಡಗಳು, ತಾಂತ್ರಿಕ ಸಾಧ್ಯತೆ ಹಾಗೂ ಜಂಟಿ ಇಲಾಖಾ ಆಯ್ಕೆ ಸಮಿತಿಯ ಅನುಮೋದನೆಯಂತೆ ಆದ್ಯತೆಯ ಆಧಾರದಲ್ಲಿ ಪರಿಶೀಲಿಸಿ ವಿದ್ಯುತ್ ಸಂಪರ್ಕ ನೀಡಲಾಗುವುದು. ಉದ್ದೇಶಿತ ಪಂಪ್‌ಸೆಟ್ ಇರುವ ಸರ್ವೆ ನಂಬರ್ ಜಮೀನಿನಲ್ಲಿ ಈ ಹಿಂದೆ ಗಂಗಾ ಕಲ್ಯಾಣ, ಎಸ್‌ಸಿಪಿ/ಟಿಎಸ್‌ಪಿ ಅಥವಾ ಸರ್ಕಾರದ ಯಾವುದೇ ಯೋಜನೆಯಡಿ ವಿದ್ಯುತ್ ಸಂಪರ್ಕ ಪಡೆಯದಿರುವ ಫಲಾನುಭವಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಮೆಸ್ಕಾಂ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.