ಶಿವಮೊಗ್ಗದಲ್ಲಿ ರಾಯರ ಆರಾಧನಾ ಮಹೋತ್ಸವ, 3 ದಿನ ಏನೆಲ್ಲ ಕಾರ್ಯಕ್ರಮ ಇರಲಿದೆ? ಇಲ್ಲಿದೆ ಡಿಟೇಲ್ಸ್‌

ಶಿವಮೊಗ್ಗ: ದುರ್ಗಿಗುಡಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಆಗಸ್ಟ್‌ 29ರಿಂದ ಮೂರು ದಿನ ರಾಯರ 355ನೇ ಆರಾಧನಾ ಮಹೋತ್ಸವ ನಡೆಯಲಿದೆ. ಇದಕ್ಕಾಗಿ ಸಿದ್ಧತೆಗಳು ಪೂರ್ಣಗೊಂಡಿದ್ದು, ಪೂಜಾ ಕೈಂಕರ್ಯಗಳು ಆರಂಭವಾಗಿವೆ. ಇನ್ನು, ಇದೇ ಮೊದಲ ಬಾರಿ ದೇವರಿಗೆ ಚಿನ್ನದ ಕವಚ, ಬೆಳ್ಳಿಯ ದಶಾವತಾರ ಹಾರವನ್ನು ಹಾಕಲಾಗುತ್ತಿದೆ.

ಆರಾಧನಾ ಮಹೋತ್ಸವದ ಅಂಗವಾಗಿ ಇಂದಿನಿಂದಲೇ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಪೂಜೆಗಳು ಆರಂಭವಾಗಿವೆ. ಮಠದ ಸಭಾಂಗಣದಲ್ಲಿ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ ಆಯೋಜಿಸಲಾಗಿತ್ತು. ದೊಡ್ಡ ಸಂಖ್ಯೆಯ ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಸಂಜೆ ವೇಳೆಗೆ ಪ್ರಾರ್ಥನೋತ್ಸವ, ಗೋಪೂಜೆ, ಧ್ವಜಾರೋಹಣ, ಶ್ರೀ ಲಕ್ಷ್ಮಿ ಪೂಜೆ, ಧಾನ್ಯ ಪೂಜೆ ಆಯೋಜಿಸಲಾಗಿದೆ.

Aradanotsava-in-Shivamogga-Durgigudi-Raghavendra-Mutt

ಯಾವ್ಯಾವ ದಿನ ಏನೇನು ಪೂಜೆ?

ಮೂರು ದಿನದ ಆರಾಧನಾ ಮಹೋತ್ಸವದ ಕುರಿತು ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಕಾರ್ಯದರ್ಶಿ ಸುರೇಶ್‌, ಆಗಸ್ಟ್‌ 29 ರಿಂದ 31ರವರೆಗೆ ಆರಾಧನೋತ್ಸವ ನಡೆಯಲಿದೆ. ಆಗಸ್ಟ್‌ 29ರಂದು ಶ್ರೀ ಗುರುಗಳ ಪೂರ್ವಾರಾಧನೆ ನಡೆಯಲಿದೆ. ಬೆಳಿಗ್ಗೆ 6 ಗಂಟೆಯಿಂದ ಅಷ್ಟೋತ್ತರ ಪಾರಾಯಣ, ಕ್ಷೀರಾಭಿಷೇಕ ಸೇವೆ, ಫಲ ಪಂಚಾಮೃತ ಸೇವೆ ಇರಲಿದೆ. ಬೆಳಿಗ್ಗೆ 10 ಗಂಟೆ ನಂತರ ಸರ್ವಸೇವಾ ಪುಷ್ಪಾರ್ಚನೆ ಸೇವೆ ನೆರವೇರಲಿದೆ. ಸಂಜೆ 6 ಗಂಟೆ ನಂತರ ಮಠದ ಆವರಣದಲ್ಲಿ ಬೆಳ್ಳಿ ರಥೋತ್ಸವ ನಡೆಯಲಿದೆ. ಆಗಸ್ಟ್‌ 30ರಂದು ಇದೇ ಪೂಜೆಗಳು ನೆರವೇರಲಿದೆ. ಆಗಸ್ಟ್‌ 31ರಂದು ಮಠ ಹೊರಾಂಗಣದಲ್ಲಿ ಮರದ ರಥೋತ್ಸವ ನಡೆಯಲಿದೆʼ ಎಂದರು.

ಮೂರು ದಿನವು ಅನ್ನದಾಸೋಹ

ಆರಾಧನಾ ಮಹೋತ್ಸವ ಸಂದರ್ಭ ಮೂರು ದಿನವು ಅನ್ನದಾಸೋಹ ಇರಲಿದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಕಳೆದ ವರ್ಷ ಸುಮಾರು 50 ಸಾವಿರ ಭಕ್ತರು ಪ್ರಸಾದ ಸ್ವೀಕರಿಸಿದ್ದರು. ಇನ್ನು, ಅನ್ನ ಸಂತರ್ಪಣೆ, ಉದಯಾಸ್ಥಮಾನ ಸೇವೆ, ಅಷ್ಟೋತ್ತರ ಪಾರಾಯಣ ಸೇರಿ ವಿವಿಧ ಸೇವೆಗಳಿಗೆ ಭಕ್ತರು ಚೀಟಿ ಪಡೆಯಲು ಅವಕಾಶ ನೀಡಲಾಗಿದೆ

ಚಿನ್ನದ ಕವಚ, ಬೆಳ್ಳಿ ದಶಾವತಾರ ಹಾರ

ಇದೇ ಮೊದಲ ಬಾರಿಗೆ ದುರ್ಗಿಗುಡಿಯ ಶ್ರೀ ರಾಘವೇಂದ್ರ ಸ್ವಾಮಿಗೆ ಚಿನ್ನದ ಕವಚ ಮತ್ತು ಬೆಳ್ಳಿ ದಶಾವತಾರ ಹಾರ ಮಾಡಿಸಲಾಗಿದೆ.

ದೇವರಿಗೆ 100 ಗ್ರಾಂ ತೂಕದ ಚಿನ್ನದ ಲೇಪನವಿರುವ ಮುಖವಾಡ ಧಾರಣೆ ಮಾಡಲಾಗುತ್ತದೆ. 2.5 ಕೆ.ಜಿ ತೂಕದ ಬೆಳ್ಳಿಯ ದಶಾವತಾರ ಹಾರವನ್ನು ತೊಡಸಲಿದ್ದೇವೆ. ಆರಾಧನಾ ಮಹೋತ್ಸವದ ಮೂರು ದಿನವು ಭಕ್ತರು ಇದರ ದರ್ಶನ ಪಡೆಯಬಹುದು.

– ಸುರೇಶ್‌, ಶ್ರೀ ರಾಘವೇಂದ್ರ ಸ್ವಾಮಿ ಮಠದ ಕಾರ್ಯದರ್ಶಿ

ಆರಾಧನಾ ಮಹೋತ್ಸವದ ಸಿದ್ಧತೆ ಹೇಗಿದೆ?

ರಾಯರ 355ನೇ ಆರಾಧನಾ ಮಹೋತ್ಸವಕ್ಕೆ ದುರ್ಗಿಗುಡಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಸಿದ್ಧತೆ ಪೂರ್ಣಗೊಂಡಿದೆ. ಮಠದ ಮುಂಭಾಗದ ರಸ್ತೆಯಲ್ಲಿ ಎರಡು ಬದಿಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಈ ಭಾಗದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಮಠದ ಮುಂದೆ ಪೆಂಡಾಲ್‌ ಹಾಕಲಾಗಿದೆ. ಭದ್ರತೆಗಾಗಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್.ಬಿ ಅವರು ಮಠಕ್ಕೆ ಭೇಟಿ ಭದ್ರತೆ ಕುರಿತು ಚರ್ಚಿಸಿದ್ದಾರೆ.

ಆರಾಧನಾ ಮಹೋತ್ಸವದ ಅಂಗವಾಗಿ ಇಂದಿನಿಂದಲೇ ಭಕ್ತರು ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭಕ್ತರು ಆಗಮಿಸಿ ದೇವರಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಇನ್ನು, ಮೂರು ದಿನದ ಆರಾಧನಾ ಮಹೋತ್ಸವದ ಕುರಿತ ವಿಡಿಯೋ ಇಲ್ಲಿದೆ.