BUSINESS NEWS: ಭಾರತದ ಮಾವಿನ ಹಣ್ಣುಗಳ ರಫ್ತಿಗೆ ಜಾಗತಿಕ ಮಟ್ಟದಲ್ಲಿ ಭಾರಿ ಹಿನ್ನಡೆಯಾಗಿದೆ. ಜಪಾನ್ ದೇಶವು 20 ವರ್ಷಗಳ ನಂತರ ಭಾರತೀಯ ಮಾವಿನ ಹಣ್ಣುಗಳ ಆಮದನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ.
ಈ ನಿರ್ಧಾರದಿಂದಾಗಿ ಭಾರತದ ಅತ್ಯಂತ ದುಬಾರಿ ಮತ್ತು ಜನಪ್ರಿಯ ತಳಿಗಳಾದ ಅಲ್ಫಾನ್ಸೋ (ಬಾದಾಮಿ), ಕೇಸರ್, ಲಂಗ್ಡಾ ಮತ್ತು ಬಂಗನಪಲ್ಲಿ ಮಾವಿನ ಹಣ್ಣುಗಳ ಜಪಾನ್ ರಫ್ತು ಸ್ಥಗಿತಗೊಂಡಿದೆ.

ಜಪಾನ್ ನಿರ್ಧಾರಕ್ಕೆ ಕಾರಣವೇನು?
ಕಳೆದ ಮಾರ್ಚ್ ತಿಂಗಳಲ್ಲಿ ಜಪಾನ್‌ನ ಅಧಿಕಾರಿಗಳು ಉತ್ತರ ಪ್ರದೇಶದ ರಹಮಾನ್‌ಪುರದಲ್ಲಿರುವ ಭಾರತದ ವೇಪರ್ ಹೀಟ್ ಟ್ರೀಟ್‌ಮೆಂಟ್ ಘಟಕದಲ್ಲಿ ಪರಿಶೀಲನೆ ನಡೆಸಿದ್ದರು. ಇಲ್ಲಿ ಲೋಪದೋಷಗಳು ಕಂಡುಬಂದಿವೆ. ಈ ಹಿನ್ನೆಲೆ ಜಪಾನ್‌ನ ಯೊಕೊಹಾಮಾ ಸಸ್ಯ ಸಂರಕ್ಷಣಾ ಸಂಸ್ಥೆಯು, 2026ರ ಮಾರ್ಚ್ 25ರ ನಂತರ ರಫ್ತು ಪ್ರಮಾಣಪತ್ರ ಪಡೆದಿರುವ ಎಲ್ಲಾ ಭಾರತೀಯ ಮಾವಿನ ಹಣ್ಣುಗಳ ಸಾಗಣೆಯನ್ನು ತಿರಸ್ಕರಿಸುವುದಾಗಿ ಪ್ರಕಟಿಸಿದೆ.
ರೈತರಲ್ಲಿ ಆತಂಕ ಮೂಡಿಸಿದ ಬೆಳವಣಿಗೆ
- 1986ರಲ್ಲೂ ಕೀಟಗಳ ಭೀತಿಯಿಂದಾಗಿ ಭಾರತದ ಮಾವಿನ ಹಣ್ಣುಗಳ ಮೇಲೆ ಜಪಾನ್ ನಿಷೇಧ ಹೇರಿತ್ತು. ಭಾರತವು ತನ್ನ ತಂತ್ರಜ್ಞಾನ ಸುಧಾರಿಸಿಕೊಂಡ ಹಿನ್ನೆಲೆ 2006 ರಲ್ಲಿ ನಿಷೇಧ ತೆರವುಗೊಳಿಸಲಾಗಿತ್ತು. ಈಗ 20 ವರ್ಷಗಳ ನಂತರ ಪುನಃ ಆಮದು ಸ್ಥಗಿತಗೊಂಡಿದೆ.
- ಜಪಾನ್ ದೇಶವು ಭಾರತದ ಮಾವಿಗೆ ಅತಿ ದೊಡ್ಡ ಮಾರುಕಟ್ಟೆಯಲ್ಲ. ಆದರೆ ಈ ದೇಶವು ಅತ್ಯಂತ ಪ್ರೀಮಿಯಂ ಮಾರುಕಟ್ಟೆಯಾಗಿದೆ. 2025 – 26ರ ಅವಧಿಯಲ್ಲಿ ಜಪಾನ್‌ಗೆ ಸುಮಾರು 1.54 ಮಿಲಿಯನ್ ಡಾಲರ್ ಮೌಲ್ಯದ ಮಾವು ರಫ್ತಾಗಿತ್ತು. ಜಪಾನ್‌ನ ಈ ನಿರ್ಧಾರ ಭಾರತದ ಮಾವು ಖರೀದಿಸುತ್ತಿರುವ ಇತರೆ ದೇಶಗಳ ಮೇಲೂ ಪರಿಣಾಮ ಉಂಟು ಮಾಡುವ ಸಾಧ್ಯತೆ ಇದೆ.
ಹವಾಮಾನ ವೈಪರೀತ್ಯ ಹಾಗೂ ಅತಿಯಾದ ಶಾಖದಿಂದಾಗಿ ಮಹಾರಾಷ್ಟ್ರದ ಅಲ್ಫಾನ್ಸೋ ತಳಿಯ ಮಾವು ಬೆಳೆಗಾರರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ. ಇದರ ನಡುವೆ ರಫ್ತು ಮಾರುಕಟ್ಟೆ ಕೈತಪ್ಪಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

