ಶಿವಮೊಗ್ಗ: ನಗರದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನೆ ಸ್ವಯಂಸೇವಕ ಪ್ರಶಸ್ತಿ ಲಭಿಸಿದೆ. ಬೆಂಗಳೂರಿನ ರಾಜ್ಯ ಎನ್‌ಎಸ್‌ಎಸ್ ಕೋಶವು 2024 ಹಾಗೂ 2025ನೇ ಸಾಲಿನ ರಾಜ್ಯ ಪ್ರಶಸ್ತಿಗಳನ್ನು ಪ್ರಕಟಿಸಿದೆ. (ಈ ಸುದ್ದಿಯನ್ನು ಇನ್ನು 41 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ಸಂಧ್ಯಾ ಕೆ.ಕೆ. ಅವರಿಗೆ 2024ನೇ ಸಾಲಿನ ಅತ್ಯುತ್ತಮ ಎನ್‌ಎಸ್‌ಎಸ್ ಸ್ವಯಂಸೇವಕಿ ಪ್ರಶಸ್ತಿ ಹಾಗೂ ಹರ್ಷವರ್ಧನ ಅವರಿಗೆ 2025ನೇ ಸಾಲಿನ ಅತ್ಯುತ್ತಮ ಎನ್‌ಎಸ್‌ಎಸ್ ಸ್ವಯಂಸೇವಕ ಪ್ರಶಸ್ತಿ ದೊರೆತಿದೆ ಎಂದು ಕಾಲೇಜಿನ ಪ್ರಾಂಶುಪಾಲೆ ಸಂಧ್ಯಾ ಕಾವೇರಿ ತಿಳಿಸಿದ್ದಾರೆ.

ಪ್ರಶಸ್ತಿಗೆ ಆಯ್ಕೆಯಾದ ಇಬ್ಬರೂ ವಿದ್ಯಾರ್ಥಿಗಳು 2024ರ ರಾಜ್ಯ ಮಟ್ಟದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕುವೆಂಪು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದರು. ಹರ್ಷವರ್ಧನ ಅವರು ರಾಜ್ಯ ಎನ್‌ಎಸ್‌ಎಸ್ ತುಕಡಿಯನ್ನು ಮುನ್ನಡೆಸಿದ್ದರು.
ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳನ್ನು ಹಾಗೂ ಎನ್‌ಎಸ್‌ಎಸ್ ಅಧಿಕಾರಿಗಳಾದ ಸುಕೀರ್ತಿ, ಮೋಹನಕುಮಾರ್ ಅವರನ್ನು ಮಾನಸ ಟ್ರಸ್ಟ್ ನಿರ್ದೇಶಕಿ ಡಾ. ರಜನಿ ಪೈ, ಶೈಕ್ಷಣಿಕ ನಿರ್ದೇಶಕರಾದ ಪ್ರೀತಿ ಶಾನಭಾಗ್, ವಾಮನ ಶಾನಭಾಗ್, ರಾಜೇಂದ್ರ ಚೆನ್ನಿ ಹಾಗೂ ಆಡಳಿತಾಧಿಕಾರಿ ರಾಮಚಂದ್ರ ಬಾಳಿಗ ಅಭಿನಂದಿಸಿದ್ದಾರೆ.