ಶಿವಮೊಗ್ಗ: ಅಧ್ಯಯನವಿಲ್ಲದ ಅಧ್ಯಾಪನ ಅರ್ಥಹೀನ. ಇಂದಿನ ಪರಿವರ್ತನೆಯ ಯುಗದಲ್ಲಿ ಶಿಕ್ಷಕರು ಕ್ರಿಯಾಶೀಲರಾದಾಗ ಮಾತ್ರ ಮಕ್ಕಳಿಗೆ ಪರಿಣಾಮಕಾರಿಯಾಗಿ ಶಿಕ್ಷಣ ನೀಡಲು ಸಾಧ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ (ಎನ್‌ಇಎಸ್) ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್ ಅಭಿಪ್ರಾಯಪಟ್ಟರು. ➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ನಗರದ ಕಸ್ತೂರಬಾ ಬಾಲಿಕಾ ಪ್ರೌಢಶಾಲೆ ವತಿಯಿಂದ ಕುವೆಂಪು ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2026-27ನೇ ಸಾಲಿನ ವಿದ್ಯಾರ್ಥಿನಿ ಸಂಘದ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶತಪ್ರತಿಶತ ಫಲಿತಾಂಶ ತಂದ ಅಧ್ಯಾಪಕರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

“ಶಿಕ್ಷಣ ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗಬಾರದು. ಮಕ್ಕಳಲ್ಲಿ ಪ್ರಜಾತಂತ್ರ ವ್ಯವಸ್ಥೆಯ ಅರಿವು, ಸಾಮಾಜಿಕ ಜವಾಬ್ದಾರಿ, ನೈತಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವಂತಿರಬೇಕು. ಶಿಕ್ಷಕರು ಕೇವಲ ಪುಸ್ತಕದ ಅಭ್ಯಾಸ ಮಾಡಿಸದೆ, ಮಕ್ಕಳಲ್ಲಿ ಅಡಗಿರುವ ಅಂತಃಶಕ್ತಿಯನ್ನು ಗುರುತಿಸಿ ಸಾಧಕರನ್ನಾಗಿ ರೂಪಿಸಲು ಗಮನ ಹರಿಸಬೇಕು” ಎಂದು ಕರೆ ನೀಡಿದರು.
ಎನ್‌ಇಎಸ್ ಸಹ ಕಾರ್ಯದರ್ಶಿ ಡಾ. ಪಿ. ನಾರಾಯಣ್ ಮಾತನಾಡಿ, “72 ವರ್ಷಗಳ ಶೈಕ್ಷಣಿಕ ಇತಿಹಾಸ ಹೊಂದಿರುವ ಕಸ್ತೂರಬಾ ಶಾಲೆಯು ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ದಾಖಲಿಸಿದೆ. ಇಂತಹ ಅತ್ಯುತ್ತಮ ಸಾಧನೆಗಾಗಿ ಶ್ರಮಿಸಿದ ಇಡೀ ಶಿಕ್ಷಕ ವೃಂದ ಅಭಿನಂದನಾರ್ಹ” ಎಂದರು.
ಇದೇ ವೇಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿಷಯವಾರು ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿನಿಯರನ್ನು ನಗದು ಬಹುಮಾನ ಹಾಗೂ ನೆನಪಿನ ಕಾಣಿಕೆ ನೀಡಿ ಪುರಸ್ಕರಿಸಲಾಯಿತು. ಸಮಾರಂಭದಲ್ಲಿ ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್. ನಾಗರಾಜ, ನಿರ್ದೇಶಕ ಎಚ್.ಸಿ. ಶಿವಕುಮಾರ್, ಕಸ್ತೂರಬಾ ಬಾಲಿಕಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ರವಿಕುಮಾರ್, ವಿದ್ಯಾರ್ಥಿನಿ ಸಂಘದ ಪ್ರಧಾನಿ ಗಾನವಿ, ವಿರೋಧ ಪಕ್ಷದ ನಾಯಕಿ ಕೃತಿಕಾ ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲ ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
