ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಜುಲೈ 2020
ಕುವೆಂಪು ವಿಶ್ವವಿದ್ಯಾಲಯದ 30ನೇ ಘಟಿಕೋತ್ಸವ ನಡೆಸಲು ರಾಜ್ಯಪಾಲರು ಸಮ್ಮತಿಸಿದ್ದು, ಜಿಲ್ಲಾಧಿಕಾರಿಗಳು ಅನುಮತಿ ನೀಡಿದಲ್ಲಿ ಜುಲೈ 28 ಅಥವಾ 29ರಂದು ಆಂತರಿಕವಾಗಿ ಘಟಿಕೋತ್ಸವ ಆಯೋಜಿಸಲು ಸಿಂಡಿಕೇಟ್ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ತಿಳಿಸಿದ್ದಾರೆ.

ಕುವೆಂಪು ವಿವಿಯಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ವರ್ಷದ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ನಡೆಯಬೇಕಿದ್ದ ಘಟಿಕೋತ್ಸವ, ಈಗಾಗಲೇ ಕರೋನಾದ ಕಾರಣದಿಂದ ವಿಳಂಬವಾಗಿದೆ. ಈ ಕುರಿತು ವಿಶ್ವವಿದ್ಯಾಲಯ ಸಲ್ಲಿಸಿದ ಮನವಿಗೆ ಸ್ಪಂದಿಸಿದ ರಾಜ್ಯಪಾಲ ವಜುಭಾಯಿ ವಾಲಾ, ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿ ಘಟಿಕೋತ್ಸವ ಆಯೋಜಿಸಲು ಸಮ್ಮತಿ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ತಿಂಗಳ ಅಂತ್ಯದ ವೇಳೆಗೆ ಘಟಿಕೋತ್ಸವ ಆಯೋಜಿಸಲು ಸಿಂಡಿಕೇಟ್ ಸದಸ್ಯರು ಸಹಮತ ವ್ಯಕ್ತಪಡಿಸಿದ್ದಾರೆ. ಅನುಮತಿಗಾಗಿ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದರು.

ಆಂತರಿಕ ಘಟಿಕೋತ್ಸವದ ಪ್ಲಾನ್
ದಿನೇ ದಿನೇ ಕರೋನ ವ್ಯಾಪಕವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅನುಮತಿ ನೀಡಿದಲ್ಲಿ ಈ ಬಾರಿಯ ಘಟಿಕೋತ್ಸವವನ್ನು ಇನ್ ಹೌಸ್ ಮಾದರಿಯಲ್ಲಿ (ಆಂತರಿಕವಾಗಿ) ಆಯೋಜಿಸಲಾಗುವುದು. ಸುಮಾರು ಒಂದು ಸಾವಿರ ಜನರು ಭಾಗವಹಿಸಬಹುದಾದ ವಿಶ್ವವಿದ್ಯಾಲಯದ ಹೊಸ ಘಟಿಕೋತ್ಸವ ಸಭಾಂಗಣದಲ್ಲಿ ದೈಹಿಕ ಅಂತರವನ್ನು ಕಾಯ್ದುಕೊಂಡು ಸರ್ಕಾರದ ಮಾರ್ಗದರ್ಶಿ ಸೂತ್ರಗಳ ಅನ್ವಯ ಘಟಿಕೋತ್ಸವವನ್ನು ನಡೆಸಲಾಗುವುದು.
ರಾಂಕ್ ವಿಜೇತರು, ಪಿಎಚ್ಡಿ ಪದವೀಧರರು, ಗೌರವ ಡಾಕ್ಟರೇಟ್ ಪಡೆದವರು, ಸಿಂಡಿಕೇಟ್ ಸದಸ್ಯರು, ಶೈಕ್ಷಣಿಕ ಮಂಡಳಿ ಸದಸ್ಯರು ಮತ್ತು ವಿಶ್ವವಿದ್ಯಾಲಯದ ಸಿಬ್ಬಂದಿ ಒಳಗೊಂಡಂತೆ ಸುಮಾರು 500 ಮಂದಿ ಮಾತ್ರ ಭಾಗವಹಿಸಬಹುದಾಗಿದ್ದು, ಪೋಷಕರು ಮತ್ತು ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ ಎಂದು ತಿಳಿಸಿದರು.
ಜೇಷ್ಠತಾ ಪಟ್ಟಿಗೆ ಅನುಮೋದನೆ
ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕುವೆಂಪು ವಿಶ್ವವಿದ್ಯಾಲಯದ ಅಧ್ಯಾಪಕೇತರ ನೌಕರರ ಜೇಷ್ಠತೆಗೆ ಸಂಬಂಧಿಸಿದಂತೆ, ಜನವರಿ 20ರಂದು ಅಂತರ್ಜಾಲದಲ್ಲಿ ಪ್ರಕಟಿಸಿದ ಜೇಷ್ಠತಾ ಪಟ್ಟಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಜೊತೆಗೆ ಇದಕ್ಕೆ ಸಂಬಂಧಿಸಿದ ಬಡ್ತಿ ಮತ್ತ ವೇತನ ಸವಲತ್ತುಗಳನ್ನು ಸಹ ಅತಿ ಜರೂರೆಂದು ಪರಿಗಣಿಸಿ ಕೂಡಲೇ ಅರ್ಹ ಸಿಬ್ಬಂದಿಗೆ ಒದಗಿಸಬೇಕೆಂದು ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಕುಲಸಚಿವ ಪ್ರೊ. ಎಸ್.ಎಸ್.ಪಾಟೀಲ್, ಪರೀಕ್ಷಾಂಗ ಕುಲಸಚಿವ ಪ್ರೊ. ಎಂ ವೆಂಕಟೇಶ್ವರಲು, ಸಿಂಡಿಕೇಟ್ ಸದಸ್ಯರಾದ ಧರ್ಮಪ್ರಸಾದ್, ಬಳ್ಳೇಕೆರೆ ಸಂತೋಷ್, ಎಚ್.ಬಿ.ರಮೇಶ್ ಬಾಬು, ರಾಮಲಿಂಗಪ್ಪ, ಎಸ್. ಆರ್. ನಾಗರಾಜ್, ಕಿರಣ್ ದೇಸಾಯಿ ಮತ್ತಿತರರು ಉಪಸ್ಥಿತರಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200