ಶಿವಮೊಗ್ಗದಲ್ಲಿ ಭಾರತದ ಲೆಡ್‌ ಮ್ಯಾನ್‌, ಶಿಕ್ಷಕರಿಗೆ ಮಹತ್ವದ ಸಲಹೆ, ಏನದು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

NEWS HIGHLIGHTS

ಶಿವಮೊಗ್ಗ: ಮಕ್ಕಳಲ್ಲಿ ಸೀಸದ (ಲೆಡ್) ಅಂಶ ಹೆಚ್ಚಾಗುವುದು ಅವರ ಮೆದುಳಿನ ವಿಕಾಸದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಸೀಸದ ವಿಷಬಾಧೆಯ ಈ ದುಷ್ಪರಿಣಾಮಗಳನ್ನು ತಡೆಯಲು ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಭಾರತದ ಲೆಡ್ ಮ್ಯಾನ್ ಎಂದೇ ಪ್ರಸಿದ್ಧರಾಗಿರುವ ಪರಿಸರ ವಿಜ್ಞಾನಿ ಹಾಗೂ ಸಾರ್ವಜನಿಕ ಆರೋಗ್ಯ ತಜ್ಞ ಡಾ. ತುಪ್ಪಿಲ್ ವೆಂಕಟೇಶ್ ಕರೆ ನೀಡಿದ್ದಾರೆ.

➤ ಸುದ್ದಿಯ ಮುಂದಿನ 7 ಪ್ಯಾರಾಗಳು ಕೆಳಗಿವೆ.

ನಗರದ ದುರ್ಗಿಗುಡಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಿಗಾಗಿ ಆಯೋಜಿಸಿದ್ದ ‘ಆಹಾರ ಮತ್ತು ಕುಡಿಯುವ ನೀರಿನಲ್ಲಿ ಸೀಸದ ಮಾಲಿನ್ಯ, ಮಕ್ಕಳಲ್ಲಿ ಸೀಸದ ವಿಷಬಾಧೆಯ ದುಷ್ಪರಿಣಾಮಗಳು ಹಾಗೂ ತಡೆಗಟ್ಟುವ ಕ್ರಮಗಳ’ ಕುರಿತ ವಿಶೇಷ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸುಬ್ಬಯ್ಯ ಸಂಶೋಧನಾ ಸಂಸ್ಥೆ ಹಾಗೂ ರೋಟರಿ ಕ್ಲಬ್ ಆಫ್ ಶಿವಮೊಗ್ಗ ಈಸ್ಟ್ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Lead-Man-of-India-Dr-Tuppil-Venkatesh-at-shimoga.

ಭಾರತದ ಲೆಡ್‌ ಮ್ಯಾನ್‌ ಏನೇನು ಹೇಳಿದರು?

“ಮಕ್ಕಳ ಮೆದುಳು ಮತ್ತು ನರಮಂಡಲವು ಬೆಳವಣಿಗೆಯ ಹಂತದಲ್ಲಿರುವುದರಿಂದ, ಸೀಸದ ಅಂಶವು ಅದರ ಮೇಲೆ ತೀವ್ರವಾದ ಆಘಾತವನ್ನು ಉಂಟುಮಾಡುತ್ತದೆ. ಇದು ನೇರವಾಗಿ ಮೆದುಳಿನ ಜೀವಕೋಶಗಳಿಗೆ ಹಾನಿ ಮಾಡುತ್ತದೆ. ದೇಹದಲ್ಲಿ ಸೀಸದ ಪ್ರಮಾಣ ಹೆಚ್ಚಾದಂತೆ ಮಗುವಿನ ಬುದ್ಧಿಮತ್ತೆ (ಐಕ್ಯೂ) ಮಟ್ಟ ಕುಸಿಯುತ್ತಾ ಹೋಗುತ್ತದೆ. ಇದರಿಂದ ಮಕ್ಕಳಿಗೆ ಕಲಿತದ್ದನ್ನು ನೆನಪಿಟ್ಟುಕೊಳ್ಳುವುದು ಕಷ್ಟವಾಗುತ್ತದೆ ಹಾಗೂ ಅವರ ವರ್ತನೆಯಲ್ಲಿಯೂ ನಕಾರಾತ್ಮಕ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಈ ಅಪಾಯದ ಬಗ್ಗೆ ಶಿಕ್ಷಕರು ಮತ್ತು ಪೋಷಕರಲ್ಲಿ ವ್ಯಾಪಕ ಅರಿವು ಮೂಡುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಡಾ. ತುಪ್ಪಿಲ್ ವೆಂಕಟೇಶ್ ತಿಳಿಸಿದರು.

ನಾವು ನಿತ್ಯ ಬಳಸುವ ಬಣ್ಣಗಳು, ಆಟಿಕೆಗಳು, ಕಲುಷಿತ ನೀರು, ತರಕಾರಿ, ಪೆನ್ಸಿಲ್, ಹೇರ್ ಡೈ ಹಾಗೂ ನ್ಯೂಸ್ ಪೇಪರ್ ಪೊಟ್ಟಣಗಳು ಸೇರಿದಂತೆ ವಿವಿಧ ಪದಾರ್ಥಗಳಲ್ಲಿ ಸೀಸದ ಅಂಶ ಅಡಗಿರುತ್ತದೆ. ಇವುಗಳ ಬಳಕೆಯ ಬಗ್ಗೆ ತೀವ್ರ ಮುನ್ನೆಚ್ಚರಿಕೆ ವಹಿಸಬೇಕು. ಮಕ್ಕಳು ಇಂತಹ ವಸ್ತುಗಳಿಂದ ದೂರವಿರುವಂತೆ ನೋಡಿಕೊಳ್ಳಬೇಕು ಹಾಗೂ ಸ್ವಚ್ಛತೆ ಮತ್ತು ಪೌಷ್ಟಿಕ ಆಹಾರ ಸೇವನೆಯ ಕಡೆಗೆ ಗಮನಹರಿಸಬೇಕು. ಒಂದು ವೇಳೆ ಮಗುವಿನ ಬೆಳವಣಿಗೆಯಲ್ಲಿ ಕುಂಠಿತ ಕಂಡುಬಂದರೆ, ತಕ್ಷಣವೇ ವೈದ್ಯರನ್ನು ಭೇಟಿಯಾಗಿ ರಕ್ತದಲ್ಲಿನ ಸೀಸದ ಪ್ರಮಾಣವನ್ನು ಪರೀಕ್ಷಿಸಬೇಕು ಎಂದು ಡಾ. ತುಪ್ಪಿಲ್ ವೆಂಕಟೇಶ್ ಸಲಹೆ ನೀಡಿದರು.

ಸಾಮಾನ್ಯವಾಗಿ ಈ ರಕ್ತ ಪರೀಕ್ಷೆಗೆ ₹1200ರವರೆಗೆ ವೆಚ್ಚವಾಗುತ್ತದೆ. ಆದರೆ ಇಂದು ದುರ್ಗಿಗುಡಿ ಸರ್ಕಾರಿ ಶಾಲೆಯಲ್ಲಿ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಈ ವಿಷಬಾಧೆಯನ್ನು ತಡೆಗಟ್ಟುವಲ್ಲಿ ಶಿಕ್ಷಕರ ಪಾತ್ರ ದೊಡ್ಡದಿದೆ. ದೇಶದಾದ್ಯಂತ ಈಗಾಗಲೇ 50 ರಿಂದ 60 ಸಾವಿರ ಶಿಕ್ಷಕರಿಗೆ ಸೀಸದ ಬಗ್ಗೆ ತರಬೇತಿ ನೀಡಿ ಅರಿವು ಮೂಡಿಸಲಾಗಿದೆ. ಕೇವಲ ನಗರಗಳು ‘ಸ್ಮಾರ್ಟ್ ಸಿಟಿ’ಯಾದರೆ ಸಾಲದು; ನಮ್ಮ ಜನ ಮತ್ತು ಮಕ್ಕಳು ‘ಸ್ಮಾರ್ಟ್’ ಆಗಬೇಕು ಎಂದು ತಿಳಿಸಿದರು.

“ಸೀಸವು ಮಕ್ಕಳ ಬುದ್ಧಿಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಈ ಹಿಂದೆ ಲಕ್ನೋ ಮೆಡಿಕಲ್ ಕಾಲೇಜಿನಲ್ಲಿ ರಕ್ತದಲ್ಲಿ ಸೀಸದ ಪ್ರಮಾಣ ಹೆಚ್ಚಾಗಿ ಮೆದುಳಿನ ವಿಕಾಸ ಕುಂಠಿತಗೊಂಡಿದ್ದ ಮಗುವಿನ ಪ್ರಕರಣವನ್ನು ನಾವು ಕಂಡಿದ್ದೇವೆ. ಪತ್ರಿಕೆಗಳ ಮೇಲೆ ಎಣ್ಣೆಯುಕ್ತ ಆಹಾರದ ಪೊಟ್ಟಣಗಳನ್ನು ಕಟ್ಟುವುದು ಅತ್ಯಂತ ಅಪಾಯಕಾರಿ”

– ಡಾ.ಶಶಿಧರ್, ತಜ್ಞ ವೈದ್ಯ

“ಸೀಸದ ಮಾಲಿನ್ಯವು ಮಕ್ಕಳಲ್ಲಿ ಕಲಿಕಾ ನ್ಯೂನ್ಯತೆ ಮತ್ತು ಜ್ಞಾಪಕ ಶಕ್ತಿಯ ಕೊರತೆಗೆ ಪ್ರಮುಖ ಕಾರಣವಾಗುತ್ತಿದ್ದು, ಪೋಷಕರು ಮತ್ತು ಶಿಕ್ಷಕರು ಈ ನಿಟ್ಟಿನಲ್ಲಿ ಜಾಗೃತರಾಗಬೇಕು”

– ಸೌಮ್ಯ, ದಲ್ಲಾಸ್‌ನ ವೈದ್ಯಕೀಯ ವಿದ್ಯಾರ್ಥಿನಿ

ದುರ್ಗಿಗುಡಿ ಶಾಲೆಯ ಮುಖ್ಯ ಶಿಕ್ಷಕಿ ಭಾರತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಡಿಎಸ್‌ಓ ಡಾ.ನಾಗರಾಜ್ ನಾಯ್ಕ್, ಕೆಎಫ್‌ಡಿ ನೋಡಲ್ ಅಧಿಕಾರಿ ಡಾ.ಹರ್ಷವರ್ಧನ್, ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಡಾ.ಬಾಲು, ರೋಟರಿ ಸಂಸ್ಥೆಯ ಕಾರ್ಯದರ್ಶಿ ಧನಂಜಯ ರಾಂಪುರ್, ವಿಜಯಕುಮಾರ್ ಹಾಗೂ ಮಹೇಶ್ ಉಪಸ್ಥಿತರಿದ್ದರು. ಎನ್‌ವಿಬಿಡಿಸಿಪಿ ಅಧಿಕಾರಿ ಡಾ.ಗುಡದಪ್ಪ ಕಸಬಿ ಕಾರ್ಯಕ್ರಮ ನಿರ್ವಹಿಸಿದರು.